
India
oi-Pragathi S
ನವದೆಹಲಿ: 8ನೇ ತರಗತಿಯ ಎನ್ಸಿಇಆರ್ಟಿ (NCERT) ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ’ ಕುರಿತು ಉಲ್ಲೇಖಿಸಿರುವ ವಿವಾದ ಇದೀಗ ಅತ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಕರಣದ ತೀವ್ರತೆಯನ್ನು ಅರಿತ ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್ನಲ್ಲಿ ಬೇಷರತ್ ಕ್ಷಮೆಯಾಚಿಸಿದೆ. ಶಿಕ್ಷಣ ಸಚಿವಾಲಯದ ಪರವಾಗಿ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ (Solicitor General) ತುಷಾರ್ ಮೆಹ್ತಾ ಅವರು ನ್ಯಾಯಾಲಯದ ಮುಂದೆ ಈ ಕ್ಷಮಾಪಣೆ ಸಲ್ಲಿಸಿದ್ದಾರೆ.
ಇದೇ ವೇಳೆ, ಈ ಪ್ರಮಾದಕ್ಕೆ ನೇರ ಹೊಣೆಯಾಗಿರುವ ಎನ್ಸಿಇಆರ್ಟಿ ನಿರ್ದೇಶಕರು (NCERT Director) ಮತ್ತು ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಅವರ ವಿರುದ್ಧ ಏಕೆ ಕಠಿಣ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಸ್ಪಷ್ಟನೆ ಕೇಳಿದೆ.

ಸಿಜೆಐ ಸೂರ್ಯಕಾಂತ್ ತೀವ್ರ ಆಕ್ರೋಶ
ಪಠ್ಯದಲ್ಲಿನ ವಿವಾದಾತ್ಮಕ ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನ್ಯಾಯಾಂಗ ವ್ಯವಸ್ಥೆಗೆ ಕೆಟ್ಟ ಹೆಸರು ತರಲು ಮಾಡಿರುವ ಪೂರ್ವನಿಯೋಜಿತ ಪಿತೂರಿ ಎಂಬಂತೆ ಕಾಣುತ್ತಿದೆ. ಈ ಕೃತ್ಯಕ್ಕೆ ಯಾರು ಜವಾಬ್ದಾರರು ಎಂಬುದನ್ನು ಪತ್ತೆಹಚ್ಚುವುದು ನನ್ನ ಪ್ರಮುಖ ಕರ್ತವ್ಯ. ತಪ್ಪಿತಸ್ಥರ ತಲೆದಂಡವಾಗಲೇಬೇಕು. ಈ ವಿಚಾರದಲ್ಲಿ ಯಾರನ್ನೂ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ,” ಎಂದು ಸಿಜೆಐ ಆಕ್ರೋಶ ಎಚ್ಚರಿಕೆ ನೀಡಿದ್ದಾರೆ.
ಎನ್ಸಿಇಆರ್ಟಿಯಿಂದ ಅಧಿಕೃತ ಕ್ಷಮೆಯಾಚನೆ
ತೀವ್ರ ವಿರೋಧ ಹಾಗೂ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾದ ಬೆನ್ನಲ್ಲೇ ಎನ್ಸಿಇಆರ್ಟಿ ಕೂಡ ತನ್ನ ತಪ್ಪೊಪ್ಪಿಕೊಂಡು ಅಧಿಕೃತವಾಗಿ ಕ್ಷಮೆಯಾಚಿಸಿದೆ. “ಭಾರತೀಯ ಸಂವಿಧಾನದ ಆಧಾರಸ್ತಂಭವಾಗಿರುವ ಮತ್ತು ಮೂಲಭೂತ ಹಕ್ಕುಗಳ ರಕ್ಷಕವಾಗಿರುವ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮಂಡಳಿಗೆ ಅತ್ಯುನ್ನತ ಗೌರವವಿದೆ. ಪಠ್ಯದಲ್ಲಿ ಸೇರ್ಪಡೆಯಾಗಿರುವ ವಿಷಯವು ಸಂಪೂರ್ಣವಾಗಿ ಉದ್ದೇಶರಹಿತವಾದದ್ದು (Unintentional) ಮತ್ತು ಇದೊಂದು ಅಚಾತುರ್ಯದ ಪ್ರಮಾದವಾಗಿದೆ. ವಿವಾದಾತ್ಮಕ ಅಂಶಗಳ ಸೇರ್ಪಡೆಯಾಗಿರುವುದಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ” ಎಂದು ಮಂಡಳಿಯು ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಫೆಬ್ರವರಿ 24, 2026ರಂದು ಬಿಡುಗಡೆಯಾಗಿದ್ದ 8ನೇ ತರಗತಿಯ “ಎಕ್ಸ್ಪ್ಲೋರಿಂಗ್ ಸೊಸೈಟಿ: ಇಂಡಿಯಾ ಅಂಡ್ ಬಿಯಾಂಡ್, ಸಂಪುಟ II” ಪಠ್ಯಪುಸ್ತಕದ 4ನೇ ಅಧ್ಯಾಯದಲ್ಲಿ (ಪುಟ 125-142) ‘ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ’ ಎಂಬ ಶೀರ್ಷಿಕೆಯಡಿ ಈ ವಿವಾದಾತ್ಮಕ ಸಾಲುಗಳು ಮುದ್ರಣಗೊಂಡಿದ್ದವು. ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಇದೀಗ ಈ ಪುಸ್ತಕದ ವಿತರಣೆಯನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ.
ಮಾರಾಟವಾಗಿರುವ 38 ಪುಸ್ತಕಗಳಿಗಾಗಿ ಹುಡುಕಾಟ
ಶಿಕ್ಷಣ ಸಚಿವಾಲಯದ ಮೂಲಗಳ ಪ್ರಕಾರ, ಮುದ್ರಣಗೊಂಡಿದ್ದ ಒಟ್ಟು 2.25 ಲಕ್ಷ (2,25,000) ಪ್ರತಿಗಳ ಪೈಕಿ ವಿತರಣೆ ಸ್ಥಗಿತಗೊಳ್ಳುವ ಮುನ್ನವೇ 38 ಪ್ರತಿಗಳು ಮಾತ್ರ ಮಾರುಕಟ್ಟೆಯಲ್ಲಿ ಮಾರಾಟವಾಗಿವೆ. ವಿತರಕರ ದಾಸ್ತಾನಿನಲ್ಲಿ ಉಳಿದುಕೊಂಡಿದ್ದ 2,24,962 ಪ್ರತಿಗಳನ್ನು ಎನ್ಸಿಇಆರ್ಟಿ ಗೋದಾಮಿಗೆ (Warehouse) ಸುರಕ್ಷಿತವಾಗಿ ವಾಪಸ್ ತರಿಸಿಕೊಳ್ಳಲಾಗಿದೆ. ಆದರೆ, ಈಗಾಗಲೇ ಗ್ರಾಹಕರಿಗೆ ಮಾರಾಟವಾಗಿರುವ ಆ 38 ಪುಸ್ತಕಗಳನ್ನು ಸಹ ಎಲ್ಲೆಡೆ ಹುಡುಕಿ, ವಾಪಸ್ ಪಡೆಯಲು ಎನ್ಸಿಇಆರ್ಟಿ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/ncert-textbook-row-centre-apologises-in-supreme-court-show-cause-notice-issued-to-director-445165.html. xn--babytilbehr-pgb.com does not claim ownership of this content. All rights remain with the original publisher.
