Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು | Petrol-Diesel Price War: R. Ashoka Slams DCM DK Shivakumar Over Fuel Tax Hikes in Karnataka

Karnataka

oi-Shankrappa Parangi

ಬೆಂಗಳೂರು: ಚುನಾವಣೆ ಮುಗಿದ ತಕ್ಷಣ ಈ ಹಿಂದೆ ಮಾಡಿದಂತೆ ಕೇಂದ್ರ ಸರ್ಕಾರ ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಮಾಡಲಿದೆ. ಇದೆಲ್ಲವೂ ಚುನಾವಣೆ ಗಿಮಿಕ್ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದರು. ಮೊದಲು ನಿಮ್ಮ ರಾಜ್ಯ ಕಾಂಗ್ರೆಸ್‌ ಸರ್ಕಾರ ತೆರಿಗೆ ಲೂಟಿ ಹೊಡೆಯುವುದನ್ನು ನಿಲ್ಲಿಸಿ ನಂತರ ಬೇರೆಯವರಿಗೆ ಬುದ್ಧಿ ಹೇಳಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗರಂ ಆಗಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಇಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆಗಳು ಅತ್ಯಂತ ಹಾಸ್ಯಾಸ್ಪದ ಮತ್ತು ವಿಪರ್ಯಾಸದಿಂದ ಕೂಡಿವೆ. ಕೇಂದ್ರ ಸರ್ಕಾರದತ್ತ ಬೆರಳು ತೋರಿಸುವ ಮುನ್ನ, ತಮ್ಮದೇ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಜೇಬಿಗೆ ಹೇಗೆ ಕತ್ತರಿ ಹಾಕುತ್ತಿದೆ ಎಂಬುದಕ್ಕೆ ಅವರು ಮೊದಲು ಉತ್ತರಿಸಬೇಕು ಎಂದು ಅವರು ಶನಿವಾರ ಎಕ್ಸ್‌ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Petrol-Diesel Price War

ಮೇ 2023 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜೋಡಿ ಜನಸಾಮಾನ್ಯರ ಹೊಟ್ಟೆಯ ಮೇಲೆ ಹೊಡೆದು ತಮ್ಮ “ಗ್ಯಾರಂಟಿ”ಗಳ ವೈಫಲ್ಯವನ್ನು ಮುಚ್ಚಿ ಹಾಕಲು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತಮ್ಮ ಪಾಲಿನ ಎಟಿಎಂ ಮಾಡಿಕೊಂಡಿದ್ದಾರೆ.

2024ರಲ್ಲಿ ಇಂಧನ ಬೆಲೆ ಹೆಚ್ಚಿಸಿದ್ದು ಕಾಂಗ್ರೆಸ್

ನಿಮ್ಮ ಕಾಂಗ್ರೆಸ್ ಸರ್ಕಾರದ ತೆರಿಗೆ ಲೂಟಿಯ ವರದಿ ಸ್ಪಷ್ಟವಾಗಿದೆ. ಜೂನ್ 2024 ರಲ್ಲಿ ಪೆಟ್ರೋಲ್ ಬೆಲೆಯನ್ನು ಸುಮಾರು ₹3 ಮತ್ತು ಡೀಸೆಲ್ ಬೆಲೆಯನ್ನು ಇದೇ ಕಾಂಗ್ರೆಸ್ ಸರ್ಕಾರ ₹3.5 ಹೆಚ್ಚಿಸಿತ್ತು. ️ಏಪ್ರಿಲ್ 2025ರಲ್ಲಿ ಮತ್ತೆ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ರೂ.2 ರಷ್ಟು ಹೆಚ್ಚಿಸಿತು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕದಲ್ಲಿ ಡೀಸೆಲ್ ಬೆಲೆ ಬರೋಬ್ಬರಿ 5.5 ರೂಪಾಯಿಯಷ್ಟು ಹೆಚ್ಚಾಗಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತವಲ್ಲ. ಬದಲಿಗೆ ಕೇವಲ ರಾಜ್ಯ ಸರ್ಕಾರದ ತೆರಿಗೆ ದಾಹದಿಂದ ಆಗಿರುವ ಬೆಲೆ ಏರಿಕೆ ಎಂದು ಅವರು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದತ್ತ ಬೆರಳು ತೋರಿಸುವ ಶಿವಕುಮಾರ್ ಅವರೇ, ರಾಜ್ಯದ ರೈತರು, ವಾಹನ ಸವಾರರು ಮತ್ತು ಜನಸಾಮಾನ್ಯರಿಗೆ ನಿಮ್ಮ ಸರ್ಕಾರ ನೀಡುತ್ತಿರುವ ಈ ಶಿಕ್ಷೆಗೆ ನಿಮ್ಮ ಬಳಿ ಉತ್ತರವಿದೆಯೇ? ಕೇಂದ್ರ ಸರ್ಕಾರದ ತೆರಿಗೆ ಹಣ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸುವ ಡಿ.ಕೆ. ಶಿವಕುಮಾರ್ ಅವರಿಗೆ ಅವರದೇ ಪಕ್ಷದ ಇತಿಹಾಸ ನೆನಪಿಲ್ಲವೆಂದು ತೋರುತ್ತದೆ.

ಯುಪಿಎ ಅವಧಿಯಲ್ಲಿ ಸೋನಿಯಾ ಗಾಂಧಿ ಮತ್ತು ಮನ್ಮೋಹನ್ ಸಿಂಗ್ ಸರ್ಕಾರ 2005 ರಿಂದ 2010 ರವರೆಗೆ ₹1.34 ಲಕ್ಷ ಕೋಟಿ ಮೌಲ್ಯದ “ಆಯಿಲ್ ಬಾಂಡ್‌ಗಳನ್ನು” (Oil Bonds) ಬಿಡುಗಡೆ ಮಾಡಿತ್ತು. ಅಂದು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಮಾಡಿದ ಆ ಸಾಲವನ್ನು ಇಂದು ಸನ್ಮಾನ್ಯ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ತೀರಿಸುತ್ತಿದೆ. ಇದುವರೆಗೆ ಕೇಂದ್ರ ಸರ್ಕಾರ ಅಸಲು ಮತ್ತು ಬಡ್ಡಿ ಸೇರಿ ₹1.5 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ನಿಮ್ಮ ಹಳೆಯ ಸಾಲ ತೀರಿಸಲು ಪಾವತಿಸಿದೆ. ಅಂದು ನೀವು ಮಾಡಿದ ಮೋಜಿನ ಬಿಲ್ ಅನ್ನು ಇಂದಿನ ತೆರಿಗೆದಾರರು ಪಾವತಿಸುವಂತಾಗಿದೆ ಎಂದರು.

2025ರಲ್ಲಿ ಆಗಿದ್ದೇನು?

ಕೇಂದ್ರ ಸರ್ಕಾರವು ಏಪ್ರಿಲ್ 2025 ರಲ್ಲಿ ಅಬಕಾರಿ ಸುಂಕವನ್ನು ಮಾರ್ಪಾಡು ಮಾಡಿದಾಗ, ಅದರ ಹೊರೆ ಜನಸಾಮಾನ್ಯರ ಮೇಲೆ ಬೀಳದಂತೆ ತೈಲ ಕಂಪನಿಗಳೇ ಭರಿಸುವಂತೆ ನೋಡಿಕೊಂಡಿತು. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ತೆರಿಗೆ ಏರಿಸಿದಾಗಲೆಲ್ಲಾ ಅದರ ನೇರ ಹೊರೆ ಬಡವರ ಮೇಲೆ ಬೀಳುತ್ತಿದೆ.

ಇಂದು ಮೋದಿ ಸರ್ಕಾರ ಕೇಂದ್ರ ತೆರಿಗೆಯನ್ನು 10 ರೂ.ನಷ್ಟು ಕಡಿತಗೊಳಿಸಿ ಜನರಿಗೆ ದೊಡ್ಡ ಮಟ್ಟದ ನೆರವು ನೀಡಿದೆ. ಆದರೆ ನೀವು ಕೇವಲ 10 ಪೈಸೆಯನ್ನೂ ಕಡಿಮೆ ಮಾಡುವ ಮನಸ್ಸು ಮಾಡಿಲ್ಲ! ನಿಮಗೆ ನಿಜವಾಗಿಯೂ ಬಡವರ ಬಗ್ಗೆ ಕಾಳಜಿ ಇದ್ದರೆ, ಮೊದಲು ನೀವು ಏರಿಸಿರುವ ಈ ₹5.5 ದರವನ್ನು ವಾಪಸ್ ಪಡೆಯಿರಿ. ಕೇವಲ ಸುದ್ದಿಗೋಷ್ಠಿ ನಡೆಸಿ ಸುಳ್ಳು ಹೇಳುವುದು ನಾಯಕತ್ವವಲ್ಲ. ಕರ್ನಾಟಕದ ಜನತೆಗೆ ನಿಮ್ಮ “ಹಿಟ್ ಅಂಡ್ ರನ್” ರಾಜಕೀಯ ಚೆನ್ನಾಗಿ ಅರ್ಥವಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?

ಚುನಾವಣೆ ಮುಗಿದ ತಕ್ಷಣ ಮತ್ತೆ ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡಲಿದೆ. ಇದೆಲ್ಲವು ಚುನಾವಣೆ ಗಿಮಿಕ್. ಕೇಂದ್ರ ಸರ್ಕಾರ ದಿನಕ್ಕೆ 1 ಸಾವಿರ ಕೋಟಿ ಹೆಚ್ಚುವರಿ ತೆರಿಗೆಯನ್ನು ಸಂಗ್ರಹ ಮಾಡುತ್ತಿದೆ. ಇದು ಯಾರಿಗೆ ತಲುಪುತ್ತಿದೆ. ಈ ಹಿಂದೆ ಇಂಧನಗಳ ಬೆಲೆ ಹೆಚ್ಚಿಸಿದಾಗ 100 ನಾಟ್ ಔಟ್ ಎಂದು ಹೋರಾಟ ಮಾಡಿದ್ದೆವು. ಈಗ ಅವರಿಗೆ ಬೇಕಾದಂತಹ ಕಂಪೆನಿಗಳಿಗೆ ಅನುಕೂಲವಾಗಲು ಟ್ರಯಲ್ ರನ್ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಶುಕ್ರವಾರ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/petrol-diesel-price-war-r-ashoka-slams-dcm-dk-shivakumar-over-fuel-tax-hikes-in-karnataka-448595.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo