PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ | Karnataka Government Limits II PU Exam Result Improvement Attempts to Only Two Years for Students

Karnataka

oi-Pragathi S

ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಸುಧಾರಿಸಿಕೊಳ್ಳಲು ನೀಡಲಾಗುತ್ತಿದ್ದ ಅವಕಾಶಗಳ ನಿಯಮದಲ್ಲಿ ಮಹತ್ತರ ಬದಲಾವಣೆ ತರಲಾಗಿದ್ದು, ಇನ್ಮುಂದೆ ಕೇವಲ ಎರಡು ವರ್ಷಗಳ ಕಾಲಾವಕಾಶವನ್ನು ಮಾತ್ರ ನೀಡಲು ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

ಹೊಸ ನಿಯಮದಲ್ಲೇನಿದೆ?

ಹೊಸ ನಿಯಮದ ಪ್ರಕಾರ, ರೆಗ್ಯುಲರ್ (ಖಾಯಂ), ಖಾಸಗಿ ಹಾಗೂ ಪುನರಾವರ್ತಿತ (ರಿಪೀಟರ್ಸ್) ವಿದ್ಯಾರ್ಥಿಗಳಿಗೆ ಈ ಆದೇಶ ಕಡ್ಡಾಯವಾಗಿ ಅನ್ವಯವಾಗಲಿದೆ. ವಿದ್ಯಾರ್ಥಿಗಳು ತಾವು ಪರೀಕ್ಷೆಗೆ ನೋಂದಾಯಿಸಿಕೊಂಡ ವರ್ಷ ಮತ್ತು ಅದರ ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಮಾತ್ರ ತಮ್ಮ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಅವಕಾಶವಿರುತ್ತದೆ. ಅಂದರೆ, ಒಂದು ನಿರ್ದಿಷ್ಟ ವರ್ಷದಲ್ಲಿ ಮೂರು ವಾರ್ಷಿಕ ಪರೀಕ್ಷೆಗಳನ್ನು ಬರೆದು, ತಮ್ಮ ಸ್ಕೋರ್‌ ಅನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮುಂದಿನ ವರ್ಷ ನಡೆಯುವ ಮೂರು ವಾರ್ಷಿಕ ಪರೀಕ್ಷೆಗಳಲ್ಲಿಯೇ ಅದನ್ನು ಪೂರ್ಣಗೊಳಿಸಬೇಕು. ಆ ಬಳಿಕ ಯಾವುದೇ ಹೆಚ್ಚುವರಿ ಅವಕಾಶಗಳನ್ನು ನೀಡಲಾಗುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

Karnataka Government

ಹಿಂದಿನ ನಿಯಮ ಏನಿತ್ತು?

ಈ ಮೊದಲು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಥವಾ ತಮ್ಮ ಫಲಿತಾಂಶವನ್ನು ಸುಧಾರಿಸಿಕೊಳ್ಳಲು ಬಯಸುವ ರೆಗ್ಯುಲರ್, ಖಾಸಗಿ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಒಟ್ಟು ಆರು ಬಾರಿ ಅವಕಾಶಗಳನ್ನು ನೀಡಲಾಗುತ್ತಿತ್ತು. ಅಲ್ಲದೆ, 2024-25ನೇ ಸಾಲಿನಿಂದ ರಾಜ್ಯ ಸರ್ಕಾರವು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ‘ಮೂರು ವಾರ್ಷಿಕ ಪರೀಕ್ಷೆ’ಗಳ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಅದರಂತೆ, 2024ರ ದ್ವಿತೀಯ ಪಿಯುಸಿ ಪರೀಕ್ಷೆ 1, 2 ಮತ್ತು 3ಕ್ಕೆ ನೋಂದಾಯಿಸಿಕೊಂಡ ಎಲ್ಲಾ ಪ್ರಕಾರದ ವಿದ್ಯಾರ್ಥಿಗಳಿಗೆ ಮುಂದಿನ ವರ್ಷಗಳಲ್ಲಿಯೂ ಫಲಿತಾಂಶ ಸುಧಾರಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ, ಈ ಹಿಂದಿನ ಆದೇಶದಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಸುಧಾರಿಸಿಕೊಳ್ಳಲು ಎಷ್ಟು ಬಾರಿ ಪರೀಕ್ಷೆ ಬರೆಯಬಹುದು ಮತ್ತು ಕಾಲಮಿತಿ ಎಷ್ಟು ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ಈ ಗೊಂದಲವನ್ನು ಪರಿಹರಿಸಲು ಈಗ ಹೊಸ ಆದೇಶ ಹೊರಡಿಸಲಾಗಿದೆ.

ನಿಯಮ ಬದಲಾವಣೆಗೆ ಕಾರಣವೇನು?

ಪ್ರತಿ ವರ್ಷ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪರೀಕ್ಷೆಗಾಗಿ ನೋಂದಣಿ ಪ್ರಕ್ರಿಯೆಯನ್ನು ನಡೆಸುವಾಗ, ಹಿಂದಿನ ವರ್ಷಗಳಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳ ಹಾಗೂ ಎಲ್ಲಾ ವಿಷಯಗಳ ಡೇಟಾವನ್ನು ಕಾಲೇಜು ಲಾಗಿನ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಅನಿರ್ದಿಷ್ಟಾವಧಿಯವರೆಗೆ ಈ ಹಳೆಯ ಡೇಟಾವನ್ನು ನಿರ್ವಹಿಸುವುದರಿಂದ ತಾಂತ್ರಿಕ ತೊಂದರೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚಿದ್ದವು.

ಜೊತೆಗೆ, ಪಾಸಾದ ಅಥವಾ ಫೇಲಾದ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ಮುದ್ರಿಸಿ ವಿತರಿಸಲಾಗುತ್ತದೆ. ಅನುತ್ತೀರ್ಣರಾದ ವಿದ್ಯಾರ್ಥಿಯೊಬ್ಬ ಫಲಿತಾಂಶವನ್ನು ಸುಧಾರಿಸಿಕೊಳ್ಳಲು ಮತ್ತೆ ಪ್ರಯತ್ನಿಸಿ ಯಶಸ್ವಿಯಾದಾಗ, ಆತನಿಗೆ ಹೊಸದಾಗಿ ಅಂಕಪಟ್ಟಿಯನ್ನು ಮುದ್ರಿಸಿ ಕೊಡಬೇಕು ಮತ್ತು ಈ ಹಿಂದೆ ನೀಡಿದ್ದ ಹಳೆಯ ಅಂಕಪಟ್ಟಿಯನ್ನು ಮಂಡಳಿಗೆ ಹಿಂಪಡೆಯಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅಂಕಪಟ್ಟಿಗಳ ನಿರ್ವಹಣೆ ಅತ್ಯಂತ ಸಂಕೀರ್ಣವಾಗುತ್ತದೆ ಎಂದು ಸರ್ಕಾರಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಎಲ್ಲಾ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳ ಹಿನ್ನೆಲೆಯಲ್ಲಿ, ಪ್ರತಿ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳಿಗೆ ತಮ್ಮ ಪರೀಕ್ಷಾ ಫಲಿತಾಂಶವನ್ನು ಸುಧಾರಿಸಿಕೊಳ್ಳಲು ಕೇವಲ ಎರಡು ವರ್ಷಗಳ ಮಿತಿಯನ್ನು ಹೇರುವಂತೆ ಕೆಎಸ್‌ಇಎಬಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಈ ಪ್ರಸ್ತಾವನೆಯನ್ನು ಪುರಸ್ಕರಿಸಿರುವ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಅಧಿಕೃತ ಆದೇಶವನ್ನು ಜಾರಿಗೊಳಿಸಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-government-limits-ii-pu-exam-result-improvement-attempts-to-only-two-years-for-students-447035.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo