Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ | Unprecedented Hailstorm in Dharwad: 1.5 Feet of Ice Blankets Kalghatgi, Massive Crop Loss Reported.

Karnataka

oi-Shankrappa Parangi

Karnataka Rain Damage: ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಎರಡು ವಾರಗಳಿಂದ ಅಕಾಲಿಕ ಆಲಿಕಲ್ಲು ಸಹಿತ ಜೋರು ಮಳೆ ಆಗುತ್ತಿದೆ. ಧಾರವಾಡ ಕಲಘಟಗಿಯಲ್ಲಿ ರಾಶಿ ರಾಶಿ ಆಲಿಕಲ್ಲು ಸುರಿದು ಭರ್ಜರಿ ಮಳೆ ಆಗಿತ್ತು. ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ ಹೀಗೆ ಅನೇಕ ಕಡೆಗಳಲ್ಲಿ ಗುಡುಗು ಸಹಿತ ಮಳೆ ದಾಖಲಾಗಿದೆ. ಈ ಮಳೆಗೆ ಧಾರವಾಡ ಜಿಲ್ಲೆ ವ್ಯಾಪ್ತಿಯ ಹಲವೆಡೆ ರೈತರು ಬೆಳೆದ ಬೆಳೆ, ಕಬ್ಬು, ಮಾವು ಇನ್ನಿತರ ಬೆಲೆಗೆ ಅಪಾರ ಹಾನಿ ಆಗಿದೆ. ಈ ನಷ್ಟದ ಕುರಿತು ‘ಶಿವಾನಂದ ಕಳವೆ’ ಅವರು ಮಾಹಿತಿ ನೀಡಿ ಫೇಸ್‌ಬುಕ್ ನಲ್ಲಿ ಹಂಚಿಕೊಂಡಿದ್ದು, ಅವರ ಬರಹ ಮತ್ತು ಮಳೆ ಹಾನಿ ವಿಡಿಯೋ, ಫೋಟೋಗಳು ಇಲ್ಲಿದೆ.

ಕಲಘಟಗಿ ಆಲಿಕಲ್ಲು ಮಳೆ, ಪ್ರಕೃತಿ ನಿರ್ಧರಿಸಿದರೆ ನಾವು ಭೂಮಿಗೆ ಏನೂ ಅಲ್ಲ

‘ರಾಜ್ಯದಲ್ಲಿ ಅತಿದೊಡ್ಡ ಆಲಿಕಲ್ಲು ಮಳೆ ಯಾವಾಗ ಆಗಿದೆ? 2026 ಮಾರ್ಚ್ 17ರ ಸಾಯಂಕಾಲ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಾಚಾಪುರದಲ್ಲಿ ನಡೆದಿದೆ. ಪರಿಣಾಮ ಯುಗಾದಿ ಹಬ್ಬಕ್ಕೆ ಈ ಊರಿನ ಒಂದು ಮರದಲ್ಲಿಯೂ ಮಾವಿನ ಟೊಂಗೆ ಹೋಗಲಿ ಎಲೆ ಕೂಡಾ ಇಲ್ಲ, ಹೊಸದಾಗಿ ಖುಷಿಯಲ್ಲಿ ಚಿಗುರಿದ್ದ ಬೇವು ಸತ್ತಂತೆ ಬೆತ್ತಲಾಗಿ ನಿಂತಿವೆ. ಭೂಮಿಯ ಮೇಲೆ ಒಂದು ಒಂದೂವರೆ ಅಡಿ ದಪ್ಪ ಹಿಮದ ಹೊದಿಕೆ ಭರ್ತಿಯಾದ ದೃಶ್ಯಕ್ಕೆ ಈ ದಿನ ಸಾಕ್ಷಿಯಾಗಿದೆ. ಕರ್ನಾಟಕ ಪರಿಸರ ಚರಿತ್ರೆಯಲ್ಲಿ ಇದೊಂದು ಎಂದೂ ಮರೆಯದ ದಾಖಲಾರ್ಹ ಘಟನೆಯಾಗಿದೆ.

Unprecedented Hailstorm in Dharwad

15 ಗಂಟೆ ಆದ್ರೂ ಕರಗದ ಆಲಿಕಲ್ಲುಗಳು

ನೆಲಕ್ಕೆ ಬಿದ್ದ ಆಲಿಕಲ್ಲುಗಳು ಹದಿನೈದು ಘಂಟೆಯಾದರೂ ಕರಗದೇ ಉಳಿದಿದ್ದು ವಿಶೇಷ. ಬರಗಾಲ, ಅತಿಯಾದ ಮಳೆ, ವಿಪರೀತ ಚಳಿ, ಏರಿದ 46ಡಿಗ್ರಿ ಉಷ್ಣತೆಯ ಪರಿಸರ ದಾಖಲೆಯ ಹಾಗೇ ಕಲಘಟಗಿ ಆಲಿಕಲ್ಲು ಭಯಾನಕ ದಾಖಲೆಗೆ ಅರ್ಹವಾಗಿದೆ.

ಕಲಘಟಗಿ ಎಳೆ ಶಿಶುಗಳು ಮಲಗಿಸುವ ಬಣ್ಣದ ತೊಟ್ಟಿಲಿಗೆ ಖ್ಯಾತಿ. ಮಲೆನಾಡು ಅರೆಮಲೆನಾಡಿನ ಹಳ್ಳಿ ಸಮುದ್ರ ಮಟ್ಟದಿಂದ 539 ಮೀಟರ್ ಎತ್ತರದ ಪ್ರದೇಶ. ಇಲ್ಲಿನ ಮಾಚಾಪುರ ಗ್ರಾಮ ನಿನ್ನೆ ಸಂಜೆ ಹೊತ್ತಿಗೆ ಹಿಮದ ರಾಶಿಗಳ ಕಾಶ್ಮೀರವೆಂದು ಚಿತ್ರಗಳು ಹರಿದಾಡಿದವು. ಎಲ್ಲವನ್ನೂ ನಂಬದೇ ಅನುಮಾನದಿಂದ AI ಚಿತ್ರವೆಂದು ನಾವುಗಳು ಸುಮ್ಮನಿದ್ದೆವು. ನೋಡು ನೋಡುತ್ತಾ ಹಲವು ವಿಡಿಯೋಗಳು ಆಲಿಕಲ್ಲು ಮಳೆಯ ಭಯಂಕರ ದರ್ಶನ ಮಾಡಿಸಿತು. ಓಡಾಟ ಕಷ್ಟವಾಗಿ ವಾಹನ ಸಂಚಾರ ನಿಂತು ಕೊನೆಗೆ ಜೆಸಿಬಿ ಯಂತ್ರಗಳು ಆಲಿಕಲ್ಲು ರಾಶಿ ಬದಿಗೆ ಸರಿಸಿದ ಮೇಲೆ ಸಂಚಾರಕ್ಕೆ ಅನುವಾಯಿತು.

ಒಂದು ಒಂದೂವರೆ ಕಿಲೋ ಮೀಟರ್ ಉದ್ದದ ಪಟ್ಟಿಯಲ್ಲಿ ಸಂಜೆ ಐದು ಆರು ಗಂಟೆ ಹೊತ್ತಿಗೆ ವಿಪರೀತ ಆಲಿಕಲ್ಲು ಸುರಿದವು. ಪ್ರತ್ಯಕ್ಷ ದರ್ಶಿಗಳು ಹೇಳಿದಂತೆ ದೃಶ್ಯ ಹೇಗಿತ್ತೆಂದರೆ ದೊಡ್ಡ ಟಿಪ್ಪರ್ ನಲ್ಲಿ ಜಲ್ಲಿ ಕಲ್ಲು ರಾಶಿ ಸುರಿದಂತೆ ವರುಣನ ಆರ್ಭಟವಿತ್ತು. ಮನೆ ಮೇಲೆ ಸುರಿವ ಅಬ್ಬರಕ್ಕೆ ಜೀವ ಉಳಿಯುವ ಖಾತ್ರಿ ಇರಲಿಲ್ಲ, ಅದೃಷ್ಟ ಯಾವ ಸಾವು ವರದಿಯಾಗಿಲ್ಲ.

ವಿಡಿಯೋ, ಪ್ರತ್ಯಕ್ಷ ದರ್ಶಿಗಳ ವಿವರ ಪಡೆದು ಸ್ವತಃ ಬೆಳಗ್ಗೆ ನೋಡಲು ಹೋಗಿದ್ದೆ. ರೈತರ ಅನುಭವ ಕೇಳಲು ಹೋಗಿದ್ದ ನನಗೆ ರಸ್ತೆ ಕಾಲುವೆ ಭರ್ತಿ ಆಲಿಕಲ್ಲುಗಳು! ಮಕ್ಕಳು, ಹಿರಿಯರು ಹಿಮದ ಜೊತೆಗೆ ಆಟವಾಡುವ ನೋಟಗಳು ಸಿಕ್ಕವು. ಒಂದು 45 ರಿಂದ 50ನಿಮಿಷ ಸುರಿದ ಆಲಿಕಲ್ಲು ಮಳೆ ಒಂದರ್ಥದಲ್ಲಿ ಕಲ್ಲಿನ ಮಳೆಯೇ ಆಗಿದೆ. ಇಲ್ಲಿ ಆಲಿಕಲ್ಲು ರಾಶಿ ಆಯಿತೇ ಹೊರತೂ ನೀರು ಹರಿದಿಲ್ಲ, ಅಂದ್ರೆ ಹೊಲ, ರಸ್ತೆ, ತೋಟ, ಬಯಲು ಎಲ್ಲವೂ ಬೆಳ್ಳಂ ಬೆಳ್ಳಗೆ ಹೊಳೆದವು.

ಕಬ್ಬು, ಮಾವು, ಇನ್ನಿತರ ಬೆಳೆ ಹಾನಿ

ಚೆಂದದ ಚಿತ್ರಗಳು ಸಿಗುತ್ತವೆ, ರೈತರಿಗೆ ಏನಾಗಿದೆ? ಮಾವಿನ ತೋಟದಲ್ಲಿ ಮರದ ಎಲೆ ಕಾಯಿಗಳು ನೆಲಕ್ಕೆ ಬಿದ್ದಿವೆ. ಸಾವಿರಾರು ಎಕರೆ ಕಬ್ಬು ನಾಲ್ಕೈದು ಅಡಿ ಬೆಳೆದಿತ್ತು, ಎಲ್ಲವೂ ಸೀಳಿ ಸೀಳಿ ನೆಲಕಚ್ಚಿವೆ. ಅಡಿಕೆ ಮರದ ಗರಿಗಳು ಸೀಳಿ ಸಸ್ಯದ ಗುರುತು ಸಿಗದಂತೆ ಆಗಿವೆ. ಮಾಚಾಪುರದಲ್ಲಿ ಒಂದು ದೊಡ್ಡ ಕೆರೆಯಿದೆ. ಇಷ್ಟು ಮಳೆ ಬಂದಿದ್ದಕ್ಕೆ ಕೆರೆ ತುಂಬಿದೆಯೆಂದು ಭಾವಿಸಬೇಡಿ, ಕೆರೆಯಲ್ಲಿ ತುಸು ಮಾತ್ರ ನೀರು ಏರಿದೆ. ಎರಡು ಮೂರು ಕಿಲೋ ತೂಕದ ಮೀನುಗಳು ದಡದಲ್ಲಿ ಸತ್ತು ಮಲಗಿವೆ. ಕಲ್ಲು ಎಸೆದು ಬೇಟೆ ಆಡಿದಂತೆ ಕಾಗೆ, ಗುಬ್ಬಿ ಮುಂತಾದ ಪಕ್ಷಿಗಳು ಸಾವನ್ನಪ್ಪಿವೆ. ರೈತರ ಕಾಳು, ಹೊಟ್ಟು ಹಾಳಾಗಿವೆ.

ನಾಲ್ಕು ಐದು ಕಿಲೋ ತೂಕದ ಆಲಿಕಲ್ಲು ಗಡ್ಡೆ ಮಳೆ ಸುರಿದು ಹನ್ನೆರಡು ಹದಿನಾರು ಗಂಟೆ ನಂತರವೂ ಇದ್ದವು. ಪ್ರಕೃತಿ ಒಂದು ನಿರ್ಧಾರ ಮಾಡಿದರೆ ನಾಶಕ್ಕೆ ಅರೆಕ್ಷಣ ಸಾಕು ಎಂಬುದಕ್ಕೆ ಘಟನೆ ಸಾಕ್ಷಿಯಾಗಿದೆ.
ರೈತರಿಗೆ ನಷ್ಟಕ್ಕೆ ಪರಿಹಾರ ಸಿಗುತ್ತದೆಯೇ? ಗೊತ್ತಿಲ್ಲ. ಇವತ್ತು ಮತ್ತೆ ಸುರಿವ ಮಳೆಗೆ ಬದುಕಲು ಬಡವರಿಗೆ ಹೊಸ ಹಂಚು ಬೇಕಾಗಿದೆ. ಬಹುತೇಕ ಮನೆಗಳ ಹಂಚು ಚೂರು ಚೂರಾಗಿವೆ. ಕೃಷಿ ಬದುಕು ನಾಶವಾಗಿದೆ.

ಮಾವಿನ ತೋಟ, ಕಬ್ಬಿನ ಬೆಳೆ ನೋಡುತ್ತಾ ಒಂದಿಷ್ಟು ರೈತರನ್ನು ಮಾತಾಡಿಸಿದ್ದೇನೆ. ನಮಗೆಲ್ಲ ಗೊತ್ತು ಆಲಿಕಲ್ಲು ಕರಗಿದಂತೆ ಇಂಥ ದುರಂತ ನೆನಪುಗಳನ್ನು ನಾವು ಸುಲಭದಲ್ಲಿ ಮರೆತು ಬಿಡುತ್ತೇವೆ. ಒಂದು ಆಲಿಕಲ್ಲು ಮಳೆ ಏನೆಲ್ಲಾ ಮಾಡುತ್ತದೆಂದು ಅರಿಯಲು ಇಲ್ಲಿನ ಮಾತು ನೆರವಾಗಬಹುದು. ಹಳ್ಳಿಯ ಪ್ರವೀಣ ಹಳ್ಳಿಗೇರಿ, ಪ್ರಕಾಶ್ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ,ಕಲ್ಲಪ್ಪ ಹೊನ್ನಳ್ಳಿ,ಜೋಸೆಪ್ ಪಿ ವಿ ಹೀಗೆ ಹಲವು ಜನ ಕ್ಷೇತ್ರ ವೀಕ್ಷಣೆಗೆ ಜೊತೆಗಿದ್ದು ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿರುವ ಅವರು ಮಳೆಗೆ ಉಂಟಾದ ಹಾನಿ ಕುರಿತ ಫೋಟೋಗಳು, ವಿಡಿಯೋ ಇಲ್ಲಿವೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/unprecedented-hailstorm-in-dharwad-1-5-feet-of-ice-blankets-kalghatgi-massive-crop-loss-reported-448387.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo