
Karnataka
-Shankrappa Parangi
ಬೆಂಗಳೂರು: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯು ಉತ್ತಮ ಕೆಲಸದ ಮೂಲಕ ರಾಷ್ಟ್ರ ಮಟ್ಟದಲ್ಲಿ ಜನಮನ್ನಣೆ ಪಡೆದಿದೆ ಎಂದಿರುವ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು, ಈ ವಲಯದಲ್ಲಿ ಖಾಲಿ ಇರುವ 1600 ಹುದ್ದೆಗಳ ಭರ್ತಿ, ಹೊಸ ಅಗ್ನಿಶಾಮಕ ಠಾಣೆ, ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ ಕುರಿತು ಗುಡ್ ನ್ಯೂಸ್ ನೀಡಿದ್ದಾರೆ.
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ತರಬೇತಿ ಅಕಾಡೆಮಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದಕ್ಕು ಮುನ್ನ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆ, ಗೃಹರಕ್ಷಕ ದಳ, ಪೌರರಕ್ಷಣೆ ಮತ್ತು ಎಸ್ಡಿಆರ್ಎಫ್ ಅಧಿಕಾರಿ, ಸಿಬ್ಬಂದಿಗಳಿಗೆ ‘ಮುಖ್ಯಮಂತ್ರಿಗಳ ಪದಕ’ ಪ್ರದಾನ ಹಾಗೂ 40 ಹೊಸ ಅಗ್ನಿಶಾಮಕ ಜಲ ವಾಹನಗಳನ್ನು ಹಸ್ತಾಂತರಿಸಿದರು.

ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯಲ್ಲಿ 1600ಕ್ಕೂ ಹೆಚ್ಚು ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡುವುದು ಬಾಕಿ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟು 1600 ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
15 ಹೊಸ ಠಾಣೆ, ಅಗ್ನಿಶಾಮಕ ಸಿಬ್ಬಂದಿ ವಸತಿ ಗೃಹ
15 ಹೊಸ ತಾಲ್ಲೂಕುಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲು ಮುಖ್ಯಮಂತ್ರಿಯವರನ್ನು ಕೋರಿದ್ದೇನೆ. ಪೊಲೀಸ್ ಗೃಹ ಯೋಜನೆಯಡಿ 40 ಸಾವಿರ ಮನೆ ಕಟ್ಟಿದ್ದೇವೆ. ಅದೇ ಮಾದರಿಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಿಗೆ ವಸತಿ ಗೃಹ ಕಲ್ಪಿಸುವ ತೀರ್ಮಾನ ಮಾಡಲಾಗಿದೆ. ಇದಕ್ಕೆ ಹಣ ಒದಗಿಸಲಾಗುವುದು ಎಂದು ಸಿಬ್ಬಂದಿಗೆ ಸಿಹಿ ಸುದ್ದಿ ಕೊಟ್ಟರು.
ಇಲಾಖೆಯು ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿ, ರಾಜ್ಯಕ್ಕೆ ಗೌರವ ಸಂಪಾದನೆ ಮಾಡಿರುವುದನ್ನು ರಾಜ್ಯ ಸರ್ಕಾರ ಮತ್ತು ಜನಸಮುದಾಯ ಗಮನಿಸಿದೆ. ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಶಿಸ್ತಿನ ಸಿಪಾಯಿಗಳು. ಪೊಲೀಸ್ ಇಲಾಖೆಯ ಜೊತೆ ಜೊತೆಯಾಗಿ ಅಷ್ಟೇ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದೀರಿ. ವಿಪತ್ತಿನ ಸಂದರ್ಭದಲ್ಲಿ ಸ್ವಯಂ ಸ್ಪೂರ್ತಿಯಿಂದ ಕೆಲಸ ಮಾಡಲು ಶ್ರಮಿಸಲಾಗಿದೆ. ಇದನ್ನು ಸಮಾಜ ಗುರುತಿಸಿದೆ. ಇಡೀ ದೇಶದಲ್ಲಿ ಕರ್ನಾಟಕ ಅಗ್ನಿಶಾಮಕ ಮತ್ತು ಇತರೆ ಇಲಾಖೆಗಳು ಮಾದರಿಯಾಗಿದೆ ಎಂದರು.
ಪ್ರತಿದಿನ ಹಲವು ದುರಂತಗಳನ್ನು ನೋಡುತ್ತೇವೆ. ನಗರ ಪ್ರದೇಶಗಳಲ್ಲಿ ಹೆಚ್ಚಿನ ಅವಘಡಗಳು ಸಂಭವಿಸುತ್ತವೆ. ತುರ್ತು ಸಂದರ್ಭದಲ್ಲಿ ಪ್ರಾಣವನ್ನು ಒತ್ತೆ ಇಟ್ಟು, ಸಾರ್ವಜನಿಕರ ಆಸ್ತಿ ಮತ್ತು ನಾಗರಿಕರ ಪ್ರಾಣ ರಕ್ಷಣೆ ಮಾಡುವ ಕೆಲಸ ಮಾಡಿದ್ದೀರಿ. ಪ್ರವಾಹಗಳು ಉಂಟಾದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಜನರನ್ನು ಕಾಪಾಡಿರುವುದನ್ನು ನೆನೆಯುತ್ತೇನೆ.
ಪ್ರವಾಹದ ವೇಳೆ ನಡೆದ ರಕ್ಷಣಾ ಕಾರ್ಯ ಶ್ಲಾಘನೀಯ
ಮಡಿಕೇರಿಯಲ್ಲಿ ಸಂಭವಿಸಿದ ಪ್ರವಾಹದ ವೇಳೆ ಒಂಟಿಯಾಗಿದ್ದ ಮನೆಗಳಲ್ಲಿದ್ದ ಜನರನ್ನು ರಕ್ಷಣೆ ಮಾಡಲು ತೆಗೆದುಕೊಂಡು ನಿರ್ಧಾರ ಮತ್ತು ಪ್ರಯತ್ನಗಳು ಅತ್ಯಂತ ಶ್ಲಾಘನೀಯ. ನಿಮ್ಮ ಕೆಲಸ ಸುಲಭ ಎಂದು ಹೇಳಲಾಗುವುದಿಲ್ಲ. ದೇಶದ ದಕ್ಷಿಣ ಭಾಗದ ರಾಜ್ಯಗಳಲ್ಲಿ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಬಣ್ಣಿಸಿದರು.
ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳು ಹೆಚ್ಚಾಗುತ್ತಿವೆ. ಅಗ್ನಿ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ನಿಯಂತ್ರಿಸಲು ಆಧುನಿಕ ಮತ್ತು ಸುಸಜ್ಜಿತ ಸಲಕರಣೆ, ವಾಹನಗಳನ್ನು ಒದಗಿಸಲಾಗಿದೆ. ಪ್ರಥಮ ಬಾರಿಗೆ 90 ಮೀಟರ್ ಎತ್ತರ ತಲುಪಬಲ್ಲ ಏರಿಯಲ್ ಲ್ಯಾಡರ್ ಫ್ಲಾಟ್ಫಾರ್ಮ್ ವಾಹನ ಮಾದರಿ ಅಗ್ನಿಶಾಮಕ ವಾಹನವಾಗಿದೆ.
15ನೆ ಹಣಕಾಸಿನ ಯೋಜನೆಯಡಿ 329 ಕೋಟಿ ರೂ. ಒದಗಿಸಲಾಗಿತ್ತು. 21 ಅಗ್ನಿಶಾಮಕ ಠಾಣೆ ನಿರ್ಮಿಸಲು 98 ಕೋಟಿ ರೂ. ಖರ್ಚು ಮಾಡಲಾಗಿದೆ. ಆಧುನಿಕ ಉಪಕರಣಗಳ ಖರೀದಿ, ತರಬೇತಿ ಕೇಂದ್ರದ ಉನ್ನತಿಕರಣಕ್ಕೆ ಕ್ರಮ ವಹಿಸಲಾಗಿದೆ ಎಂದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-fire-services-recruitment-2026-1600-vacancies-to-be-filled-soon-says-g-parameshwara-011-444917.html. xn--babytilbehr-pgb.com does not claim ownership of this content. All rights remain with the original publisher.
