
Entertainment
oi-Manohara M
ಕನ್ನಡ ಚಿತ್ರರಂಗದ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಸದ್ಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಎಲ್ಲರನ್ನೂ ಅನ್ಫಾಲೋ ಮಾಡುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಒಬ್ಬೊಬ್ಬರನ್ನೇ ಅನ್ಫಾಲೋ ಮಾಡುತ್ತಾ ಬಂದಿದ್ದ ರಿಷಬ್, ಈಗ ತಮ್ಮ ಇಡೀ ಫಾಲೋಯಿಂಗ್ ಲಿಸ್ಟ್ ಅನ್ನು ಖಾಲಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದರ ಬೆನ್ನಲ್ಲೇ ಬಗೆಬಗೆಯ ಚರ್ಚೆಗಳು ಶುರುವಾಗಿವೆ.
ಮೂವರಿಗಷ್ಟೇ ಸ್ಥಾನ
ರಿಷಬ್ ಶೆಟ್ಟಿ ಅವರ ಫಾಲೋಯಿಂಗ್ ಪಟ್ಟಿಯಲ್ಲಿ ಈಗ ಕೇವಲ ಮೂವರು ಮಾತ್ರ ಬಾಕಿ ಉಳಿದಿದ್ದಾರೆ. ಒಬ್ಬರು ಅವರ ಧರ್ಮಪತ್ನಿ ಪ್ರಗತಿ ಶೆಟ್ಟಿ, ಮತ್ತೊಂದು ಅವರದ್ದೇ ಆದ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಹಾಗೂ ರಿಷಬ್ ಶೆಟ್ಟಿ ಫೌಂಡೇಶನ್. ಇದನ್ನು ಹೊರತುಪಡಿಸಿ ಚಿತ್ರರಂಗದ ಆಪ್ತ ಗೆಳೆಯರು ಹಾಗೂ ದೊಡ್ಡ ನಿರ್ಮಾಣ ಸಂಸ್ಥೆಗಳನ್ನೂ ಅವರು ಅನ್ಫಾಲೋ ಮಾಡಿದ್ದಾರೆ. ಇದು ಚಿತ್ರರಂಗದಲ್ಲಿ ಅಚ್ಚರಿ ಮೂಡಿಸಿದೆ.

ರಿಷಬ್ ಅವರ ಈ ನಡೆ ದಿಢೀರ್ ಎಂದು ಸಂಭವಿಸಿದ್ದಲ್ಲ. ಮೊದಲು ಅವರು ತಮ್ಮ ಬ್ಲಾಕ್ಬಸ್ಟರ್ ಸಿನಿಮಾ ‘ಕಾಂತಾರ’ ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಅನ್ನು ಅನ್ಫಾಲೋ ಮಾಡುವ ಮೂಲಕ ಚರ್ಚೆ ಆರಂಭಿಸಿದ್ದರು. ನಂತರ ತಮ್ಮ ಆತ್ಮೀಯ ಗೆಳೆಯರಾದ ರಾಜ್ ಬಿ. ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್ ಅವರನ್ನೂ ಪಟ್ಟಿಯಿಂದ ಕೈಬಿಟ್ಟಿದ್ದರು. ಇದೀಗ ಅಂತಿಮವಾಗಿ ಎಲ್ಲರನ್ನೂ ಅನ್ಫಾಲೋ ಮಾಡುವ ಮೂಲಕ ತಮ್ಮ ಇನ್ಸ್ಟಾಗ್ರಾಂ ಫಾಲೋಯಿಂಗ್ ಲಿಸ್ಟ್ ಮೂರಕ್ಕೆ ತಂದು ನಿಲ್ಲಿಸಿದ್ದಾರೆ.
ಸೋಷಿಯಲ್ ಮೀಡಿಯಾದಿಂದ ದೂರ ಉಳಿದ್ರಾ ರಿಷಬ್?
ರಿಷಬ್ ಅವರ ಈ ನಿರ್ಧಾರದ ಹಿಂದೆ ಹಲವು ವದಂತಿಗಳು ಕೂಡ ಶುರುವಾಗಿವೆ. ಸಾಮಾಜಿಕ ಜಾಲತಾಣದ ಅನಗತ್ಯ ವಿಷಯಗಳಿಂದ ದೂರವಿದ್ದು, ಸಂಪೂರ್ಣವಾಗಿ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಅವರು ಈ ‘ಡಿಜಿಟಲ್ ಡಿಟಾಕ್ಸ್’ ಮೊರೆ ಹೋಗಿರಬಹುದು ಎನ್ನಲಾಗುತ್ತಿದೆ. ರಿಷಬ್ ಅವರ ಈ ನಡೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಶೆಟ್ಟರ ಈ ನಡೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಿಷಬ್ ಶೆಟ್ಟಿ ಅವರ ಬ್ಲಾಕ್ಬಸ್ಟರ್ ಸಿನಿಮಾಗಳಾದ ‘ಕಾಂತಾರ’ ಮತ್ತು ‘ಕಾಂತಾರ: ಚಾಪ್ಟರ್ 1’ ಅನ್ನು ನಿರ್ಮಿಸಿರುವ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯನ್ನು ರಿಷಬ್ ಅನ್ಫಾಲೋ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ‘ಕಾಂತಾರ’ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿತ್ತು. ಈ ಯಶಸ್ಸಿನ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್ ದೊಡ್ಡ ಬಜೆಟ್ನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ಹೊರತಂದಿತ್ತು. ಹೀಗೆ ಅತ್ಯಂತ ಯಶಸ್ವಿ ಎನಿಸಿಕೊಂಡಿದ್ದ ಈ ಜೋಡಿಯ ನಡುವೆ ಈಗ ಎಲ್ಲವೂ ಸರಿಯಿಲ್ಲವೇ? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
ಸದ್ಯ ರಿಷಬ್ ಶೆಟ್ಟಿ ಅವರು ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯೊಂದರ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆಯೇ ಅವರು ಹೊಂಬಾಳೆ ಫಿಲ್ಮ್ಸ್ ಸೇರಿದಂತೆ ತಮ್ಮ ಆಪ್ತ ಗೆಳೆಯರನ್ನೂ ಅನ್ಫಾಲೋ ಮಾಡಿ, ಕೇವಲ ಪತ್ನಿ ಪ್ರಗತಿ ಶೆಟ್ಟಿ ಮತ್ತು ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯನ್ನು ಮಾತ್ರ ಫಾಲೋ ಮಾಡುತ್ತಿರುವುದು ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಸಿನಿಮಾ ವಲಯದಲ್ಲಿ ಈ ಬಗ್ಗೆ ಎರಡು ರೀತಿಯ ಚರ್ಚೆಗಳು ನಡೆಯುತ್ತಿವೆ. ಒಂದು ಕಡೆ ಹೊಂಬಾಳೆ ಮತ್ತು ರಿಷಬ್ ನಡುವೆ ಭಿನ್ನಾಭಿಪ್ರಾಯ ಮೂಡಿರಬಹುದು ಎಂಬ ವದಂತಿಗಳಿದ್ದರೆ, ಮತ್ತೊಂದು ಕಡೆ ರಿಷಬ್ ಅವರು ಕೇವಲ ಸಿನಿಮಾ ಕೆಲಸದ ಮೇಲೆ ಗಮನ ಹರಿಸಲು ಈ ರೀತಿ ಮಾಡಿರಬಹುದು ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ರಿಷಬ್ ಶೆಟ್ಟಿ ಅಥವಾ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rishab-shetty-unfollows-everyone-except-wife-pragathi-shetty-instagram-move-sparks-buzz-448849.html. xn--babytilbehr-pgb.com does not claim ownership of this content. All rights remain with the original publisher.
