Samarth Shamanur: ದಾವಣಗೆರೆ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಫೈಟ್ ಅಂತ್ಯ: ಶಾಮನೂರು ಕುಟುಂಬದ ಕುಡಿ ಸಮರ್ಥ್ ಕಣಕ್ಕೆ | Samarth Shamanur Gets Congress Ticket for Davanagere South Bypoll Ticket Fight Ends After Meeting

Karnataka

oi-Manohara M

ದಾವಣಗೆರೆ: ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್‌ ಟಿಕೆಟ್ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಾಂಗ್ರೆಸ್‌ ಹೈಕಮಾಂಡ್ ಅಂತಿಮವಾಗಿ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು (Samarth Shamanur) ಅವರಿಗೆ ಟಿಕೆಟ್ ಫೈನಲ್‌ ಮಾಡಿದೆ.

ಟಿಕೆಟ್ ಹಂಚಿಕೆ ವಿಚಾರದಲ್ಲಿ ಉಂಟಾಗಿದ್ದ ಬಿಕ್ಕಟ್ಟನ್ನು ಶಮನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಡೆಸಿದ ಸುದೀರ್ಘ ಸಂಧಾನ ಯಶಸ್ವಿಯಾಗಿದೆ. ಸ್ಥಳೀಯ ನಾಯಕರ ಅಸಮಾಧಾನ ಮತ್ತು ಶಾಮನೂರು ಕುಟುಂಬದ ಪಟ್ಟನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ.

Samarth Shamanur

ಶಾಮನೂರು ಶಿವಶಂಕರಪ್ಪ ಉತ್ತರಾಧಿಕಾರಿ

ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಶಾಮನೂರು ಅವರಿಗೆ ಕಾಂಗ್ರೆಸ್ ಬಿ-ಫಾರಂ ನೀಡಲು ಹಸಿರು ನಿಶಾನೆ ತೋರಿಸಿದೆ. ಇದರೊಂದಿಗೆ ದಾವಣಗೆರೆ ರಾಜಕಾರಣದ ಭೀಷ್ಮ ಶಾಮನೂರು ಶಿವಶಂಕರಪ್ಪ ಅವರ ಉತ್ತರಾಧಿಕಾರಿಯಾಗಿ ಸಮರ್ಥ್ ಅವರು ಚುನಾವಣಾ ರಾಜಕೀಯಕ್ಕೆ ಅಧಿಕೃತವಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ದಾವಣಗೆರೆಯ ಈ ಉಪಚುನಾವಣೆ ಈಗ ರಾಜ್ಯ ರಾಜಕಾರಣದ ಕೇಂದ್ರಬಿಂದುವಾಗಿದ್ದು, ಯುವ ನಾಯಕ ಸಮರ್ಥ್ ಅವರನ್ನು ಮತದಾರರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಈಗ ಕುತೂಹಲದ ಸಂಗತಿ.

ಸತತ ಆರು ಬಾರಿ ಶಾಸಕರಾಗಿದ್ದ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಕಗ್ಗಂಟು ಕೊನೆಗೂ ಸುಖಾಂತ್ಯ ಕಂಡಿದೆ. ತೀವ್ರ ಪೈಪೋಟಿ ಮತ್ತು ಹಲವು ಸುತ್ತಿನ ಸಂಧಾನಗಳ ನಂತರ, ಹೈಕಮಾಂಡ್ ಶಾಮನೂರು ಕುಟುಂಬದ ಕುಡಿಯಾದ ಸಮರ್ಥ್ ಶಾಮನೂರ್ ಅವರಿಗೆ ಬಿ-ಫಾರಂ ನೀಡಲು ನಿರ್ಧರಿಸಿದೆ.

ಈ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರಿರುವುದರಿಂದ, ಈ ಬಾರಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೇ ಟಿಕೆಟ್ ನೀಡಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಹಲವು ನಾಯಕರು ಬಿಗಿ ಪಟ್ಟು ಹಿಡಿದಿದ್ದರು. ಇದು ಪಕ್ಷದೊಳಗೆ ದೊಡ್ಡ ಮಟ್ಟದ ಚರ್ಚೆಗೆ ಮತ್ತು ಬಣ ರಾಜಕೀಯಕ್ಕೆ ನಾಂದಿ ಹಾಡಿತ್ತು. ಪರಿಸ್ಥಿತಿ ಕೈಮೀರದಂತೆ ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮಧ್ಯಪ್ರವೇಶಿಸಿದ್ದರು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಜಮೀರ್ ಅಹ್ಮದ್ ಅವರ ಉಪಸ್ಥಿತಿಯಲ್ಲಿ ನಡೆದ ಸುದೀರ್ಘ ಸಭೆಯಲ್ಲಿ, ಕ್ಷೇತ್ರದ ಹಿಡಿತ ಮತ್ತು ಗೆಲುವಿನ ಸಾಧ್ಯತೆಗಳನ್ನು ಪರಿಗಣಿಸಿ ಸಮರ್ಥ್ ಶಾಮನೂರು ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

Samarth Shamanur

ಬಿ-ಫಾರಂ ಇಲ್ಲದೆ ನಾಮಪತ್ರ ಸಲ್ಲಿಕೆ

ವಿಶೇಷವೆಂದರೆ ಟಿಕೆಟ್ ಅಧಿಕೃತವಾಗಿ ಘೋಷಣೆಯಾಗುವ ಮುನ್ನವೇ ಸಮರ್ಥ್ ಅವರು ಶುಭ ಮುಹೂರ್ತದಲ್ಲಿ ತಮ್ಮ ತಾತ ಶಾಮನೂರು ಶಿವಶಂಕರಪ್ಪ ಅವರು ಬಳಸುತ್ತಿದ್ದ ಕಾರಿನಲ್ಲೇ ತೆರಳಿ ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದರು. ಈಗ ಪಕ್ಷದ ಅಧಿಕೃತ ಬೆಂಬಲವೂ ಸಿಕ್ಕಿರುವುದರಿಂದ ಶಾಮನೂರು ಕುಟುಂಬದ ರಾಜಕೀಯ ಪಾರುಪತ್ಯ ಮುಂದುವರಿದಂತಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/samarth-shamanur-gets-congress-ticket-for-davanagere-south-bypoll-ticket-fight-ends-after-meeting-447917.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo