
Entertainment
oi-Manohara M
“ಕಾಂತಾರ” ನಟಿ ಸಪ್ತಮಿ ಗೌಡ ಅವರು ಇತ್ತೀಚೆಗೆ ಪಾಪರಾಜಿಗಳ (Paparazzi) ಅಸಭ್ಯ ವರ್ತನೆಯ ವಿರುದ್ಧ ಧ್ವನಿ ಎತ್ತಿರುವುದು ಸ್ಯಾಂಡಲ್ವುಡ್ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಹಿರಿಯ ಕಲಾವಿದರೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (ಕೆಎಫ್ಸಿಸಿ) ಅಧ್ಯಕ್ಷೆ, ನಟಿ ಜಯಮಾಲ ಅವರನ್ನು ಭೇಟಿಯಾಗಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸಿನಿಮಾ ಪ್ರಚಾರದ ವೇಳೆ ಕೆಲವು ಪಾಪರಾಜಿಗಳು ಮತ್ತು ಯೂಟ್ಯೂಬರ್ಗಳು ನಟಿಯರನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸುವುದು ಹಾಗೂ ದೇಹದ ಭಾಗಗಳನ್ನು ಅನಗತ್ಯವಾಗಿ ಜೂಮ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದರ ವಿರುದ್ಧ ಸಪ್ತಮಿ ಗೌಡ ಕಿಡಿಕಾರಿದ್ದರು. ಇದನ್ನು “ಗೌರವಕ್ಕೆ ಧಕ್ಕೆ ತರುವ ಮತ್ತು ಸ್ವೀಕಾರಾರ್ಹವಲ್ಲದ ವರ್ತನೆ” ಎಂದು ಅವರು ಖಂಡಿಸಿದ್ದರು.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮತ್ತು ಚಿತ್ರರಂಗದ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಸಪ್ತಮಿ ಗೌಡ ಅವರು ಹಿರಿಯ ಕಲಾವಿದರ ತಂಡದೊಂದಿಗೆ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದಾರೆ. ಹಿರಿಯ ನಟರಾದ ಸುಂದರ್ ರಾಜ್, ನಟಿಯರಾದ ಶ್ರುತಿ, ಮಾಳವಿಕಾ ಅವಿನಾಶ್ ಮತ್ತು ಇತರ ಗಣ್ಯರು ಸಪ್ತಮಿ ಅವರಿಗೆ ಸಾಥ್ ನೀಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜಯಮಾಲಾ ಅವರನ್ನು ಭೇಟಿ ಮಾಡಿ, ಇಂತಹ ಅಸಭ್ಯ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.
ಸಪ್ತಮಿ ಗೌಡ ಅವರ ಈ ಹೋರಾಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ನಟಿಯರಾದ ರಮ್ಯಾ, ರಕ್ಷಿತಾ ಪ್ರೇಮ್, ಮೇಘನಾ ರಾಜ್, ರುಕ್ಮಿಣಿ ವಸಂತ್, ಆಶಿಕಾ ರಂಗನಾಥ್ ಸೇರಿದಂತೆ ಅನೇಕ ನಟ-ನಟಿಯರು #ActorsNotObjects ಹ್ಯಾಶ್ಟ್ಯಾಗ್ ಬಳಸಿ ಸಪ್ತಮಿ ಅವರ ನಿಲುವನ್ನು ಬೆಂಬಲಿಸಿದ್ದಾರೆ. ವಾಣಿಜ್ಯ ಮಂಡಳಿಯು ಈ ಬಗ್ಗೆ ಸಭೆ ನಡೆಸಿ, ಇನ್ನು ಮುಂದೆ ಚಲನಚಿತ್ರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಫೋಟೋಗ್ರಾಫರ್ಗಳಿಗೆ ಮತ್ತು ವಿಡಿಯೋಗ್ರಾಫರ್ಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆಯಿದೆ.
ದೇಹದ ಪ್ರದರ್ಶನಕ್ಕಲ್ಲ, ಕಲೆಗಾಗಿ ಬಂದಿದ್ದೇವೆ
ಚಿತ್ರರಂಗದ ನಟಿಯರನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಸಭ್ಯವಾಗಿ ಚಿತ್ರೀಕರಿಸುವ ಮತ್ತು ವಿಡಿಯೊಗಳನ್ನು ಜೂಮ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಪ್ರವೃತ್ತಿಯ ವಿರುದ್ಧ ನಟಿ ಸಪ್ತಮಿ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡು ಮಹಿಳಾ ಕಲಾವಿದರ ಗೌರವಕ್ಕೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಸಿನಿಮೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಟಿಯರ ಫೋಟೊ ಮತ್ತು ವಿಡಿಯೊಗಳನ್ನು ಕೆಲವು ಪಾಪರಾಜಿಗಳು ಹಾಗೂ ಯೂಟ್ಯೂಬರ್ಗಳು ಉದ್ದೇಶಪೂರ್ವಕವಾಗಿ ಅಸಭ್ಯ ಕೋನಗಳಿಂದ ಚಿತ್ರೀಕರಿಸುತ್ತಿದ್ದಾರೆ. ನಟಿಯರ ಅಭಿನಯ ಅಥವಾ ವ್ಯಕ್ತಿತ್ವಕ್ಕಿಂತ ಹೆಚ್ಚಾಗಿ ಅವರ ದೇಹದ ಭಾಗಗಳನ್ನು ಜೂಮ್ ಮಾಡಿ ವಿಡಿಯೊ ಪ್ರಸಾರ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ನಾವು ಇಲ್ಲಿಗೆ ಬಂದಿರುವುದು ನಮ್ಮ ಕಲೆ ಮತ್ತು ಸಿನಿಮಾಗಾಗಿ, ನಮ್ಮ ದೇಹವನ್ನು ಅಸಭ್ಯವಾಗಿ ಚಿತ್ರೀಕರಿಸುವುದು ಅಥವಾ ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು ನಮ್ಮ ಗೌರವಕ್ಕೆ ತರುವ ಧಕ್ಕೆ. ಇದನ್ನು ನಾವು ಸಾಮಾನ್ಯ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ಸಪ್ತಮಿ ಗುಡುಗಿದ್ದರು.
ಕಾರ್ಯಕ್ರಮಗಳನ್ನು ವರದಿ ಮಾಡುವವರು ಕನಿಷ್ಠ ಶಿಸ್ತು ಮತ್ತು ವೃತ್ತಿಪರತೆಯನ್ನು ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಒಂದು ಗಡಿರೇಖೆ ಇರುತ್ತದೆ, ಅದನ್ನು ಯಾರೂ ಮೀರಬಾರದು ಎಂದು ಅವರು ಕಿವಿಮಾತು ಹೇಳಿದ್ದರು. ಇಂತಹ ಕೆಟ್ಟ ಅನುಭವ ಎದುರಿಸಿದ ಪ್ರತಿಯೊಬ್ಬ ಮಹಿಳೆಯ ಪರವಾಗಿ ತಾವು ನಿಲ್ಲುವುದಾಗಿ ಹೇಳಿರುವ ಸಪ್ತಮಿ, ಗೌರವಕ್ಕಾಗಿ ಈ ಧ್ವನಿ ಸದಾ ಮುಂದುವರಿಯುತ್ತದೆ ಎಂದು ಎಚ್ಚರಿಸಿದ್ದರು.

ಕಾರ್ಯಕ್ರಮ ಆಯೋಜಕರೇ ಹೊಣೆ: ಎಚ್ಚರಿಕೆ
ಸಭೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಪ್ತಮಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟಿಯರನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ ವಿಡಿಯೋಗಳನ್ನು ಹರಡುವ ವಿಚಾರದ ಬಗ್ಗೆ ಸಭೆ ನಡೆಯಿತು. ಈ ಚರ್ಚೆಯಲ್ಲಿ ನಟರು, ನಿರ್ಮಾಪಕರು, ನಿರ್ದೇಶಕರು, ಡಿಜಿಟಲ್ ಪಿಆರ್ಒಗಳು, ಮುದ್ರಣ ಮಾಧ್ಯಮ, ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ ವೇದಿಕೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ವಿಷಯವನ್ನು ತೆರವಾಗಿ ಚರ್ಚಿಸಲಾಯಿತು. ಕ್ಷಮೆಯಾಚನೆ ಸಲ್ಲಿಸಲಾಯಿತು ಮತ್ತು ಅದನ್ನು ಸ್ವೀಕರಿಸಲಾಯಿತು. ಮುಂದಿನ ದಿನಗಳಲ್ಲಿ ಸಂಬಂಧಿಸಿದ ನಟಿಯ ಅನುಮತಿ ಇಲ್ಲದೆ ಇಂತಹ ವಿಡಿಯೋಗಳನ್ನು ಚಿತ್ರೀಕರಿಸುವುದು ಅಥವಾ ಹರಡುವುದು ನಡೆಯಬಾರದು ಎಂಬ ಒಪ್ಪಂದಕ್ಕೂ ಬಂದರು. ಇಂದು ಮುಂದೆ ಬಂದು ಬೆಂಬಲದ ಧ್ವನಿಯಾಗಿ ನಿಂತ ಎಲ್ಲರಿಗೂ ಧನ್ಯವಾದಗಳು. ನಮ್ಮ ಚಿತ್ರರಂಗದಲ್ಲಿ ಗೌರವ ಮತ್ತು ಮರ್ಯಾದೆಯನ್ನು ಕಾಪಾಡುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಸಪ್ತಮಿ ಗೌಡ ಹೇಳಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/sapthami-gowda-raises-paparazzi-misconduct-issue-with-karnataka-film-chamber-of-commerce-jayamala-446575.html. xn--babytilbehr-pgb.com does not claim ownership of this content. All rights remain with the original publisher.
