Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ | KD Movie Seraga Sarse Song Controversy Prem Faces Backlash Over Double Meaning Kannada Lyrics

Entertainment

oi-Manohara M

KD Movie Seraga Sarse Song Controversy: ಸ್ಯಾಂಡಲ್‌ವುಡ್‌ ನಿರ್ದೇಶಕ ಜೋಗಿ ಪ್ರೇಮ್‌ ಅವರ ಬಹುನಿರೀಕ್ಷಿತ ಚಿತ್ರ “ಕೆಡಿ-ದಿ ಡೆವಿಲ್” ಬಿಡುಗಡೆಗೂ ಮುನ್ನವೇ ವಿವಾದದ ಸುಳಿಗೆ ಸಿಲುಕಿದೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ “ಸರ್ಸೆ ನಿನ್ನ ಸೆರಗ ಸರ್ಸೆ” ಎಂಬ ಐಟಂ ಸಾಂಗ್‌ ಇದೀಗ ಭಾರಿ ಟೀಕೆಗೆ ಗುರಿಯಾಗಿದ್ದು, ಕನ್ನಡಿಗರು ನಿರ್ದೇಶಕರ ವಿರುದ್ಧ ತಿರುಗಿಬಿದ್ದಿದ್ದಾರೆ. ನಟ ಧ್ರುವ ಸರ್ಜಾ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ಹಾಡಿನಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಆದರೆ, ಈ ಹಾಡಿನ ಸಾಹಿತ್ಯದಲ್ಲಿ ಬಳಸಲಾಗಿರುವ ಪದಗಳು ಅಸಭ್ಯತೆಯಿಂದ ಕೂಡಿವೆ ಮತ್ತು ‘ಡಬಲ್‌ ಮೀನಿಂಗ್‌’ ನೀಡುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯನ್ನು ಕೆಟ್ಟದಾಗಿ ಬಿಂಬಿಸುವ ಸಾಹಿತ್ಯವನ್ನು ಪ್ರೇಮ್ ಬಳಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಹಿರಿಯ ಪತ್ರಕರ್ತೆ ಶೋಭಾ ಮಳವಳ್ಳಿ ಅವರು ಫೇಸ್‌ಬುಕ್‌ನಲ್ಲಿ Shame on you ಪ್ರೇಮ್ ಎಂದು ಬರೆದುಕೊಂಡಿದ್ದಾರೆ. ಅವರ ಬರಹ ಇಲ್ಲಿದೆ.

ಪ್ರೇಮ್ ಅಲಿಯಾಸ್ ಜೋಗಿ ಪ್ರೇಮ್, ಅಲ್ಪ‌ಪ್ರಾಣ,‌ ಮಹಾಪ್ರಾಣ ಬರದಿದ್ರೂ ಪರವಾಗಿಲ್ಲ, ಹಳ್ಳಿ ಹುಡುಗ ಅಂತ‌ ಸಹಿಸಿಕೊಂಡ್ವಿ. ಹ ಕಾರ ಬರಲ್ಲ ಏನೀಗ? ಇದೂ ಕನ್ನಡನೇ ಅಲ್ವಾ, ನಮ್ ಮಂಡ್ಯದ ಹುಡ್ಗ ಅಂತ ಮೆಚ್ಕೊಂಡ್ವಿ. ನಿನ್ನ ಪ್ರತಿಭೆ ಭಾಷೆ ಕಾರಣಕ್ಕೆ ಮಸುಕಾಗಬಾರದು ಅನ್ನೋ‌ ಕಾರಣಕ್ಕೆ‌ ತಪ್ಪು ಉಚ್ಚಾರಣೆಯನ್ನೂ ಒಪ್ಪುಕೊಂಡ್ವಿ. ಅದೆಲ್ಲಕ್ಕಿಂತ ಹೆಚ್ಚಾಗಿ, #ತಾಯೇ ದೇವರು, ತಾಯಿನೇ ಎಲ್ಲ ಬದಲಾಗೋದಿಲ್ಲ..ಅನ್ನೋ ಸಾಹಿತ್ಯ ‌ಬರೆದು, ಎಲ್ಲರ ಕರುಳು ಬಗೆದುಬಿಟ್ಯಲ್ಲ..

KD Movie Seraga Sarse Song Controversy

#ದೂರ ಹೋದರು, ಎಲ್ಲೇ ಇದ್ದರು,

ನೀನೇ ಮರೆತರೂ ತಾಯಿ ಮರೆಯಲ್ಲಾ,

ಸಾವೇ ಬಂದರೂ,ಮಣ್ಣೇ ಆದರೂ,

ತಾಯಿ ಪ್ರೀತಿಗೆಂದೆಂದು ಕೊನೆ ಇಲ್ಲಾ…..

ಅಂತ ಹೈ ಪಿಚ್ ನಲ್ಲಿ ‌ಹಾಡ್ತಿದ್ರೆ, ಕೇಳ್ತಿದ್ದವರ ಕಿವಿಯಲ್ಲೂ ಧಾರಾಕಾರ‌ ನೀರು.
ಶಿವಣ್ಣನ ನೋಡ್ತಾ ಕಣ್ಣೀರಾದವರು, ಬರೀ ಹಾಡು ಕೇಳ್ತಾ‌ ಅಮ್ಮನನ್ನು ನೆನೆಸಿಕೊಂಡು ಅತ್ತವರ ಲೆಕ್ಕ ನಿಂಗೂ ಗೊತ್ತಿಲ್ಲ ಬಿಡು. ಅದೊಂದೇ ಹಾಡಿನಿಂದ ಕರ್ನಾಟಕದ ‌ಈ ತುದಿಯಿಂದ ತಮಿಳುನಾಡಿನ ಗಡಿ ವರೆಗೂ ಹೋಗಿಬಿಟ್ಟೆ.‌

ಆದರೆ, ಬರೆದ್ಯೋ, ಗೀಚಿದ್ಯೋ, ಯಾವುದ್ಯಾವುದೋ ಧ್ಯಾನದಲ್ಲಿ ಅಕ್ಷರಗಳನ್ನೇ ಮರೆತು, ಬರೀ ನೋರಾ‌ ನೆನಪಿಸಿಕೊಂಡು, ಏದುಸಿರುಬಿಡ್ತಾ ಬರೆದ್ಯೋ.. ಸರ್ಸೆ, ಸರ್ಸೆ.. ಹಾಡು ಛೀ ಹಾಡು ಅಂತ ಯಾವ ಬಾಯಲ್ಲಿ ಹೇಳೋದು? ಪೋಲಿ ತನಕ್ಕೂ, ಶೃಂಗಾರಕ್ಕೂ ಒಂದು ತೆಳು ಗೆರೆ ಇದೆ. ಆದರೆ‌‌ ನೀನು ಗೆರೆಯಲ್ಲ, ಗಡಿಯನ್ನೇ ದಾಟಿ,‌ ನಿನ್ನೊಳಗಿನ ಕಾಮಕವಿಯನ್ನು ಬಡಿದೆಬ್ಬಿಸಿ, ಬರೆದಿರೋ ಹಾಡು ಕೇಳಿ, ಇಡೀ ಕರ್ನಾಟಕ ಅಲ್ಲ, ಬಾಲಿವುಡ್‌ನವರೂ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ. ಜೋಗಿ ಹಾಡು ಕೇಳಿ ಪಾವನವಾಗಿದ್ದ‌ ಕಿವಿಗಳಿಗೆ ಕಾದ ಸೀಸ ಬಿಟ್ಟಂಗಾಗಿದೆ.

ಕನ್ನಡ ಚಿತ್ರರಂಗದ ಗೀತರಚನೆಕಾರರ ಪಟ್ಟಿಯೇ ಇದೆ. ಕುರಾ‌ಸೀತಾರಾಮಶಾಸ್ತ್ರೀ,‌ಹುಣಸೂರು ಕೃಷ್ಣಮೂರ್ತಿ, ಸದಾಶಿವಯ್ಯ, ಗೀತಪ್ರಿಯ, ಆರ್. ಎನ್. ಜಯಗೋಪಾಲ್, ಚಿ. ಉದಯ್‌ಶಂಕರ್‌ ಅವರಂತೂ, ಕನ್ನಡ ಚಿತ್ರಗಳಿಗೆ ತಮ್ಮ ಹಾಡುಗಳ ಮೂಲಕವೇ ಹೊಸ ದಿಕ್ಕು ತೋರಿದವರು. ಅವರ‌ ಸಾಹಿತ್ಯ, ಹಾಡಿನ ಲಾಲಿತ್ಯ, ಪದಗಳ ಸಂಯೋಜನೆ ಅದಕ್ಕೆ ‌ತಕ್ಕ ಸಂಗೀತ ರಚನೆ. ಕಿವಿಗಿಂಪು. ಅಂಥ ಗೀತ‌ಸಾಹಿತಿಗಳಿಂದ ಶ್ರೀಮಂತವಾಗಿದ್ದ ಕನ್ನಡ‌ ಚಿತ್ರರಂಗವನ್ನು‌ ಉಗಿದು ಉಪ್ಪಿನಕಾಯಿ ಹಾಕುವಂತೆ ಮಾಡಿದ‌ ಕೀರ್ತಿ ನಿಮಗೆ ಸಲ್ಲುತ್ತದೆ.

ಅಲ್ಲಾ, ನಮ್ ಕನ್ನಡಿಗರು ಏನ್ ಕೊಟ್ರು ಕೇಳಿಸ್ಕೊಂಡು ಸಹಿಸ್ಕೊತಾರೆ ಅಂದುಕೊಂಡಿದ್ದೀರೋ..? ಲಿಮಿಟ್‌ ಮೀರೋದು ಅಂದ್ರೆ‌ ಇದೇ‌ ಇರಬೇಕು.‌ ಜೋಗಿ ಹಾಡು ಕೇಳಿ, ಸಂಭ್ರಮಿಸಿದ್ದ ಹೃದಯಗಳು, ಸರ್ಸೆ ಹಾಡು ಕೇಳಿ ನಾಚಿಕೆಯಿಂದ ಮುಖವನ್ನೂ,‌ ಕಿವಿಯನ್ನು ಮುಚ್ಚಿಕೊಳ್ಳೋ ಸ್ಥಿತಿಗೆ ತಂದಿರಲ್ಲ ಥತ್..! Shame on you ಪ್ರೇಮ್..


Disclaimer: This content was automatically imported from a third-party source via RSS feed. The original source is: https://kannada.oneindia.com/entertainment/kd-movie-seraga-sarse-song-controversy-prem-faces-backlash-over-double-meaning-kannada-lyrics-447333.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo