
Entertainment
oi-Manohara M
ತಮಿಳು ಕಿರುತೆರೆಯಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದ ಸುಭಾಷಿಣಿ ಅಲಿಯಾಸ್ ಸಸ್ವಿಬಾಲಾ (36), ಚೆನ್ನೈನ ಅಯ್ಯಪ್ಪಂತಾಂಗಲ್ನಲ್ಲಿರುವ ತಮ್ಮ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದಾಗಲೇ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವಾಸವಿದ್ದ ಸುಭಾಷಿಣಿ
ಶ್ರೀಲಂಕಾ ಮೂಲದ ಸುಭಾಷಿಣಿ ಅವರು 2024ರ ಏಪ್ರಿಲ್ನಲ್ಲಿ ಬೆಂಗಳೂರು ನಿವಾಸಿ ಬಿಪಿನ್ ಚಂದ್ರನ್ (38) ಎಂಬುವವರನ್ನು ವಿವಾಹವಾಗಿದ್ದರು. ದಂಪತಿ ಬೆಂಗಳೂರಿನಲ್ಲೇ ವಾಸವಾಗಿದ್ದರು. ನಟನೆಯಲ್ಲಿ ತೊಡಗಿದ್ದ ಸುಭಾಷಿಣಿ, ಚೆನ್ನೈನಲ್ಲಿ ಶೂಟಿಂಗ್ ಇದ್ದಾಗ ವಾಸ್ತವ್ಯಕ್ಕಾಗಿ ಪೋರೂರ್ ಸಮೀಪದ ಅಯ್ಯಪ್ಪಂತಾಂಗಲ್ನಲ್ಲಿ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗೆ ಪಡೆದಿದ್ದರು. ಶೂಟಿಂಗ್ ನಿಮಿತ್ತ ಮಾರ್ಚ್ 3ರಂದು ಅವರು ಚೆನ್ನೈಗೆ ಆಗಮಿಸಿದ್ದರು ಎನ್ನಲಾಗಿದೆ.

ವಿಡಿಯೋ ಕಾಲ್ನಲ್ಲಿ ನಡೆದಿದ್ದೇನು?
ಕಳೆದ ಭಾನುವಾರ ರಾತ್ರಿ ಸುಭಾಷಿಣಿ ಅವರು ಬೆಂಗಳೂರಿನಲ್ಲಿದ್ದ ತಮ್ಮ ಪತಿಯೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದರು. ಈ ವೇಳೆ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ ಎನ್ನಲಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ, ಸುಭಾಷಿಣಿ ಅವರು ವಿಡಿಯೋ ಕಾಲ್ ಚಾಲನೆಯಲ್ಲಿರುವಾಗಲೇ ಅಪಾರ್ಟ್ಮೆಂಟ್ನ ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ವಿಡಿಯೋ ಕಾಲ್ನಲ್ಲಿ ಕಂಡ ಪತಿ ಬಿಪಿನ್ ಚಂದ್ರನ್ ತಕ್ಷಣವೇ ಗಾಬರಿಗೊಂಡು, ಅಪಾರ್ಟ್ಮೆಂಟ್ನ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಭದ್ರತಾ ಸಿಬ್ಬಂದಿ ಕೂಡಲೇ ಪೋರೂರ್ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಸುಭಾಷಿಣಿ ಅವರನ್ನು ಕೆಳಗಿಳಿಸಿ ಪೂನಮಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಹೊತ್ತಿಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು.
ಪೋರೂರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ನಿಖರವಾದ ಕೌಟುಂಬಿಕ ಕಲಹ ಏನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪೋರೂರ್ ಪೊಲೀಸರು ಪ್ರಾಥಮಿಕ ಪ್ರಕ್ರಿಯೆಗಳನ್ನು ಪೂರೈಸಿದ ನಂತರ, ಸುಭಾಷಿಣಿ ಅವರ ಮೃತದೇಹವನ್ನು ಹೆಚ್ಚಿನ ತನಿಖೆಗಾಗಿ ಮತ್ತು ಮರಣೋತ್ತರ ಪರೀಕ್ಷೆಗಾಗಿ ಚೆನ್ನೈನ ಸರ್ಕಾರಿ ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಹಿಂದಿನ ನಿಖರ ಕಾರಣಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಭಾರತೀಯ ಕಾನೂನಿನ ಪ್ರಕಾರ, ಮಹಿಳೆಯ ಮದುವೆಯಾದ ಏಳು ವರ್ಷಗಳ ಒಳಗಾಗಿ ಅಸಹಜ ಸಾವು ಸಂಭವಿಸಿದರೆ ಅದರ ಬಗ್ಗೆ ಕಂದಾಯ ವಿಭಾಗೀಯ ಅಧಿಕಾರಿ (ಆರ್ಡಿಒ) ತನಿಖೆ ನಡೆಸಬೇಕು ಎಂಬ ನಿಯಮವಿದೆ. ಸುಭಾಷಿಣಿ ಮತ್ತು ಬಿಪಿನ್ ಚಂದ್ರನ್ ಅವರ ಮದುವೆಯಾಗಿ ಕೇವಲ ಎರಡು ವರ್ಷಗಳಷ್ಟೇ ಆಗಿರುವುದರಿಂದ ಈ ಪ್ರಕರಣದಲ್ಲಿ ಈಗ ಆರ್ಡಿಒ ತನಿಖೆಗೂ ಆದೇಶಿಸಲಾಗಿದೆ.

ಕೌಟುಂಬಿಕ ಕಲಹ ಅಥವಾ ವರದಕ್ಷಿಣೆ ಕಿರುಕುಳದಂತಹ ಅಂಶಗಳು ಈ ಆತ್ಮಹತ್ಯೆಗೆ ಪ್ರೇರೇಪಿಸಿವೆಯೇ ಎಂಬ ಬಗ್ಗೆ ಅಧಿಕಾರಿಗಳು ಆಳವಾದ ವಿಚಾರಣೆ ನಡೆಸಲಿದ್ದಾರೆ. ಪತಿ ಬಿಪಿನ್ ಚಂದ್ರನ್ ಅವರ ಸಮ್ಮುಖದಲ್ಲೇ ವಿಡಿಯೋ ಕಾಲ್ನಲ್ಲಿ ಈ ಘಟನೆ ನಡೆದಿರುವುದರಿಂದ, ಅವರ ಹೇಳಿಕೆಯನ್ನೂ ಸಹ ಪೊಲೀಸರು ಪ್ರಮುಖವಾಗಿ ಪರಿಗಣಿಸಿದ್ದಾರೆ.
ಸುಭಾಷಿಣಿ ಅವರು ಹಲವು ತಮಿಳು ಧಾರಾವಾಹಿಗಳಲ್ಲಿ ಮತ್ತು ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ‘ಸನ್ ಟಿವಿ’ಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ಕಯಲ್’ (Kayal) ಮೂಲಕ ಸುಭಾಷಿಣಿ ಮನೆಮಾತಾಗಿದ್ದರು. ಕಿರುತೆರೆಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದ ಅವರು, ಮುಂದೆ ಸಿನಿಮಾಗಳಲ್ಲೂ ನಟಿಸುವ ಆಸೆ ಹೊಂದಿದ್ದರು.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/tamil-serial-actress-subashini-dies-by-suicide-during-video-call-with-her-husband-in-chennai-449613.html. xn--babytilbehr-pgb.com does not claim ownership of this content. All rights remain with the original publisher.
