Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ ‘ಸಂಸ್ಕಾರ’ ಬೇಸಿಗೆ ಶಿಬಿರ | Sringeri Samskara Summer Camp 2026: Dates, Eligibility, and Registration Details for Vatus Here

Karnataka

oi-Pragathi S

ಬೇಸಿಗೆ ರಜೆ ಶುರುವಾಗುತ್ತಿದ್ದಂತೆ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಸದಾಚಾರವನ್ನು ಕಲಿಸಲು ಪೋಷಕರು ಉತ್ತಮ ಶಿಬಿರಗಳ ಹುಡುಕಾಟದಲ್ಲಿರುತ್ತಾರೆ. ಅಂಥವರಿಗಾಗಿ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಅಧೀನದಲ್ಲಿರುವ ‘ಶ್ರೀ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಮಹಾಪಾಠಶಾಲಾ’ ವತಿಯಿಂದ ಪರಾಭವ ಸಂವತ್ಸರದ ವಿಶೇಷ ‘ಸಂಸ್ಕಾರ’ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.

ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಕೇವಲ ಶಾಲಾ ಶಿಕ್ಷಣ ಮಾತ್ರವಲ್ಲದೆ, ನಮ್ಮ ಸನಾತನ ಧರ್ಮ, ಸಂಸ್ಕೃತಿ ಮತ್ತು ದಿನನಿತ್ಯದ ಆಚರಣೆಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಶೃಂಗೇರಿ ಜಗದ್ಗುರು ಭಾರತಿ ತೀರ್ಥ ಮಹಾಸ್ವಾಮಿಗಳು ಹಾಗೂ ಜಗದ್ಗುರು ವಿಧುಶೇಖರ ಭಾರತಿ ಮಹಾಸ್ವಾಮಿಗಳ ದಿವ್ಯ ಅನುಗ್ರಹ ಮತ್ತು ಮಾರ್ಗದರ್ಶನದೊಂದಿಗೆ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಬ್ರಾಹ್ಮಣ ಸಮಾಜದ ಉಪನೀತ ವಟುಗಳಿಗಾಗಿ (ಉಪನಯನವಾದ ಮಕ್ಕಳಿಗೆ) ಮಾತ್ರ ಈ ಶಿಬಿರವನ್ನು ಮೀಸಲಿಡಲಾಗಿದ್ದು, ಪಾಠಶಾಲೆಯ ವಿದ್ಯಾರ್ಥಿಗಳ ವಸತಿಗೃಹದಲ್ಲೇ ಶಿಬಿರಾರ್ಥಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

Sringeri

ದಿನಾಂಕ ಮತ್ತು ಕಟ್ಟುನಿಟ್ಟಿನ ನಿಯಮಗಳು

ಈ ಬಾರಿಯ ಬೇಸಿಗೆ ಶಿಬಿರವು ಏಪ್ರಿಲ್ 30, 2026 ರಿಂದ ಮೇ 14, 2026 ರವರೆಗೆ ಒಟ್ಟು 15 ದಿನಗಳ ಕಾಲ ಶೃಂಗೇರಿಯಲ್ಲಿ ನಡೆಯಲಿದೆ. ಇದೊಂದು ಸಂಪೂರ್ಣ ವಸತಿಯುತ ಶಿಬಿರವಾಗಿರುವುದರಿಂದ, ಶಿಬಿರಾರ್ಥಿಗಳು ಈ 15 ದಿನಗಳ ಕಾಲ ಪಾಠಶಾಲೆಯಲ್ಲೇ ಉಳಿದುಕೊಳ್ಳುವುದು ಕಡ್ಡಾಯವಾಗಿದೆ. ಶಿಬಿರದ ಮಧ್ಯದಲ್ಲಿ ಮನೆಗೆ ಹೋಗಲು ಯಾವುದೇ ಅವಕಾಶವಿರುವುದಿಲ್ಲ. ಪೋಷಕರು ಏಪ್ರಿಲ್ 29, 2026 ರಂದು ಸಂಜೆ ತಮ್ಮ ಮಕ್ಕಳನ್ನು ಪಾಠಶಾಲೆಗೆ ಕರೆತಂದು ಬಿಡಬೇಕು ಹಾಗೂ ಶಿಬಿರ ಮುಕ್ತಾಯವಾದ ಬಳಿಕ, ಅಂದರೆ ಮೇ 14 ರ ಮಧ್ಯಾಹ್ನದ ನಂತರ ವಾಪಸ್ ಮನೆಗೆ ಕರೆದುಕೊಂಡು ಹೋಗಬೇಕಾಗುತ್ತದೆ.

ಅರ್ಹತೆ ಮತ್ತು ಶಿಬಿರದ ಕಲಿಕಾ ವಿಷಯಗಳು

ಈ ಶಿಬಿರದಲ್ಲಿ ಭಾಗವಹಿಸಲು 10 ರಿಂದ 15 ವರ್ಷದೊಳಗಿನ ವಟುಗಳಿಗೆ ಮಾತ್ರ ಅವಕಾಶವಿದೆ. 15 ದಿನಗಳ ಈ ತರಬೇತಿಯಲ್ಲಿ ಮಕ್ಕಳಿಗೆ ಋಗ್ವೇದ ಹಾಗೂ ಯಜುರ್ವೇದದ ಸಂಧ್ಯಾವಂದನೆ, ಗಣಪತಿ ಸೂಕ್ತ, ಗಣಪತಿ ಅಥರ್ವಶೀರ್ಷ ಹಾಗೂ ಪ್ರಮುಖ ಸ್ತೋತ್ರಗಳನ್ನು ಉಚ್ಚಾರಣೆ ಸಹಿತ ಹೇಳಿಕೊಡಲಾಗುತ್ತದೆ.

ಬೆಳಿಗ್ಗೆ ಮತ್ತು ಮಧ್ಯಾಹ್ನದ ಅವಧಿಗಳಲ್ಲಿ ಪಾಠ ಪ್ರವಚನಗಳು ನಡೆಯಲಿವೆ. ಪ್ರತಿದಿನ ಬೆಳಿಗ್ಗೆ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಲಾಗುತ್ತದೆ. ಇದರ ಜೊತೆಗೆ ಸದಾಚಾರ ಮತ್ತು ನೈತಿಕ ಶಿಕ್ಷಣದ ಮೌಲ್ಯಗಳನ್ನು ತಿಳಿಸಿಕೊಡಲಾಗುತ್ತದೆ. ಪ್ರತಿದಿನ ಜಗದ್ಗುರುಗಳ ಅನುಗ್ರಹ ಭಾಷಣಗಳನ್ನು ಪರದೆಯ ಮೂಲಕ (Screening) ಬಿತ್ತರಿಸುವ ಮೂಲಕ ಮಕ್ಕಳಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಶಿಬಿರಾರ್ಥಿಗಳಿಗೆ ಹತ್ತಿರದಲ್ಲಿರುವ ದೇವಾಲಯಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳ ದರ್ಶನವನ್ನು ಸಹ ಮಾಡಿಸುವ ವ್ಯವಸ್ಥೆ ಮಾಡಲಾಗಿದೆ. ಧರ್ಮ, ಸನಾತನ ಪರಂಪರೆ ಬಗ್ಗೆ ಮಕ್ಕಳಲ್ಲಿರುವ ಯಾವುದೇ ಜಿಜ್ಞಾಸೆ ಅಥವಾ ಪ್ರಶ್ನೆಗಳನ್ನು ಬರೆದು ನೀಡಿದರೆ, ವಿದ್ವಾಂಸರಿಂದ ಅದಕ್ಕೆ ಸೂಕ್ತ ಉತ್ತರಗಳನ್ನು ತಿಳಿಯುವ ವಿಶೇಷ ಅವಕಾಶವೂ ಇಲ್ಲಿದೆ.

ಉಚಿತ ಸೌಲಭ್ಯಗಳು ಹಾಗೂ ತರಬೇಕಾದ ಸಾಮಗ್ರಿಗಳು

ಪಾಠಶಾಲೆಯ ವತಿಯಿಂದ ಶಿಬಿರಾರ್ಥಿಗಳಿಗೆ ಭೋಜನ, ಉಪಾಹಾರ ಮತ್ತು ವಸತಿ ಸೇರಿ ಎಲ್ಲ ವ್ಯವಸ್ಥೆಗಳು ಸಂಪೂರ್ಣ ಉಚಿತವಾಗಿರುತ್ತವೆ. ಆದರೆ, ಶಿಬಿರಾರ್ಥಿಗಳು ತಮ್ಮ ದೈನಂದಿನ ಸಂಧ್ಯಾವಂದನೆಗೆ ಮತ್ತು ಪೂಜೆಗೆ ಬೇಕಾಗುವ ಅಗತ್ಯ ಸಾಮಗ್ರಿಗಳನ್ನು ತಮ್ಮೊಂದಿಗೇ ತರಬೇಕಾಗುತ್ತದೆ.

ನೋಂದಣಿ ಹೇಗೆ?

ಈ ಶಿಬಿರದಲ್ಲಿ ಕೇವಲ 30 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಮೊದಲು ಕರೆ ಮಾಡುವ 30 ಮಂದಿಗೆ ಆದ್ಯತೆ ಮೇರೆಗೆ ಪ್ರವೇಶ ನೀಡಲಾಗುತ್ತದೆ. ಆಸಕ್ತರು ವಿಳಂಬ ಮಾಡದೆ ಏಪ್ರಿಲ್ 20, 2026 ರ ಒಳಗೆ ದೂರವಾಣಿ ಮೂಲಕ ಕರೆ ಮಾಡಿ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಪೋಷಕರು ಪಾಠಶಾಲೆಯ ಅಧ್ಯಕ್ಷರನ್ನು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು: 8762594805 ಅಥವಾ 8217251670. ಸೀಮಿತ ಅವಕಾಶಗಳಿರುವುದರಿಂದ ಆದಷ್ಟು ಬೇಗ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/sringeri-samskara-summer-camp-2026-dates-eligibility-and-registration-details-for-vatus-here-447771.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo