
Karnataka
oi-Hitesh Y
Tamarind Price Surge: ಹುಣಸೆಹಣ್ಣಿನ ಕೃಷಿಯಲ್ಲಿ ಹಲವು ಸಮಸ್ಯೆಗಳು ಎದುರಾಗಿರುವ ಹೊರತಾಗಿಯೂ, ಹುಣಸೆಹಣ್ಣಿಗೆ ಬಂಪರ್ ಲಾಭ ಬರುತ್ತಿದೆ. ಭಾರತೀಯರ ಅಡುಗೆಯಲ್ಲಿ ಹುಣಸೆಹಣ್ಣಿಗೆ ವಿಶೇಷವಾದ ಸ್ಥಾನವಿದೆ. ಉಪ್ಪಿನ ನಂತರ ವಿಶೇಷವಾದ ಸ್ಥಾನವಿರುವ ಪದಾರ್ಥವೆಂದರೆ ಅದು ಹುಣಸೆಹಣ್ಣು ಎಂದು ಹೇಳಬಹುದು. ಇದೀಗ ಕಳೆದ ಎರಡು ವರ್ಷಗಳಿಂದಲೂ ಹುಣಸೆಹಣ್ಣಿನ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ಕಳೆದ ವರ್ಷ ಕೆಜಿಗೆ ಹುಣಸೆಹಣ್ಣಿನ ಬೆಲೆಯು 100 ರೂಪಾಯಿಯಿಂದ 120 ರೂಪಾಯಿಯ ವರೆಗೆ ಇತ್ತು. ಅದೇ ಬೆಲೆ ಇದೀಗ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಜಿಗೆ 200 ರೂಪಾಯಿಯಿಂದ 220 ರೂಪಾಯಿಗೆ ಹೆಚ್ಚಳವಾಗಿದೆ.
ದೇಶದಲ್ಲಿ ಹುಣಸೆ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವುದು, ಉತ್ಪಾದನೆಯಲ್ಲಿ ಕುಸಿತ, ಕಾರ್ಮಿಕರ ಕೊರತೆ ಮತ್ತು ಹೆಚ್ಚಿನ ಬೇಡಿಕೆ ಸೇರಿದಂತೆ ಹಲವು ಕಾರಣಗಳಿಗೆ ಹುಣಸೆಹಣ್ಣಿನ ಬೆಲೆಯು ಗಗನಕ್ಕೇರಿದೆ. ಹುಣಸೆ ಹಣ್ಣನ್ನು ಕರ್ನಾಟಕದ ಒಣ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಕರ್ನಾಟಕದ ದಕ್ಷಿಣ ಭಾಗ ಹಾಗೂ ಉತ್ತರ ಭಾಗ ಎರಡರಲ್ಲೂ ಈ ಬೆಳೆಯನ್ನು ಬೆಳೆಯಲಾಗುತ್ತದೆ.

ಮುಖ್ಯವಾಗಿ ಕೋಲಾರ, ತುಮಕೂರು, ಬಳ್ಳಾರಿ, ವಿಜಯಪುರ, ಬೆಳಗಾವಿ, ರಾಯಚೂರು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಹುಣಸೆ ಬೆಳೆಯು ಹೆಚ್ಚಾಗಿ ಬೆಳೆಯಲಾಗುತ್ತದೆ. ಹುಣಸೆ ಕೃಷಿಯು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಹುಣಸೆಮರವನ್ನು ಹತ್ತುವವರ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ ಹುಣಸೆ ಸಂಸ್ಕರಣೆಗೆ ಸಂಬಂಧಿಸಿದಂತೆ ನೂತನ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳ ಅಭಿವೃದ್ಧಿ ಆಗಿಲ್ಲ. ಹುಣಸೆ ಸಂಗ್ರಹದ ವಿಚಾರದಲ್ಲಿ ಹಲವು ಸವಾಲುಗಳು ಎದುರಾಗಿವೆ. ಈ ಎಲ್ಲಾ ಕಾರಣಗಳಿಂದಲೂ ಹುಣಸೆ ಕೃಷಿಯು ಸಂಕಷ್ಟದಲ್ಲಿ ಸಿಲುಕಿದೆ. ಇದೆಲ್ಲದರ ಹೊರತಾಗಿಯೂ ಹುಣಸೆಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಹುಣಸೆ ಬೆಲೆಯೂ ಹೆಚ್ಚಳವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹುಣಸೆ ಹಣ್ಣಿಗೆ ಅಸಾಮಾನ್ಯ ಬೇಡಿಕೆ ಬಂದಿದೆ. ಪೂರೈಕೆ ಕಡಿಮೆಯೇ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗಿದೆ. ಕರ್ನಾಟಕದಲ್ಲಿ ಹುಣಸೆ ಹಣ್ಣಿನ ಮುಖ್ಯ ಕೊಯ್ಲು ಅವಧಿ ಫೆಬ್ರವರಿಯಿಂದ ಏಪ್ರಿಲ್ ವರೆಗೆ ಇದೆ. ಒಣ ಋತುವಿನಲ್ಲಿ ಹಣ್ಣುಗಳನ್ನು ಅತ್ಯುತ್ತಮವಾಗಿ ಕೊಯ್ಲು ಮಾಡಲು, ಸಂಸ್ಕರಿಸಲು ಮತ್ತು ಒಣಗಿಸಲು ಸೂಕ್ತವಾಗಿರುತ್ತದೆ. ಏಪ್ರಿಲ್ ವರೆಗೆ ಕೊಯ್ಲು ಮುಂದುವರಿದಂತೆ, ಪೂರೈಕೆ ಹೆಚ್ಚಾದರೆ ಬೆಲೆಗಳು ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಕೋಲ್ಡ್ ಸ್ಟೋರೇಜ್ ಅಗತ್ಯ
ಇನ್ನು ಹುಣಸೆಹಣ್ಣಿನ ಸಂಗ್ರಹಕ್ಕೆ ಮುಖ್ಯವಾಗಿ ಕೋಲ್ಡ್ ಸ್ಟೋರೇಜ್ ಸಮಸ್ಯೆ ಎದುರಾಗಿದೆ. ಈ ಬೆಳೆಯು ಮಳೆ ಬಂದಾಗ ಬಣ್ಣ ಕಳೆದುಕೊಳ್ಳುತ್ತಿದೆ. ಸುರಕ್ಷಿತವಾಗಿ ಸಂಗ್ರಹಿಸಿ ಇರಿಸುವುದಕ್ಕೆ ಕೋಲ್ಡ್ ಸ್ಟೋರೇಜ್ ಅಗತ್ಯವಿದೆ ಎಂದು ಹುಣಸೆಕೃಷಿ ಮಾಡುವ ರೈತರು ಆಗ್ರಹಿಸಿದ್ದಾರೆ. ಇನ್ನು ತುಮಕೂರಿನ ಸಗಟು ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಹುಣಸೆಹಣ್ಣು ಕ್ವಿಂಟಲ್‌ಗೆ 15,000 ರಿಂದ 25,000 ರೂಪಾಯಿಗಳ ವರೆಗೆ ಮಾರಾಟವಾಗುತ್ತಿದೆ. ಆದರೆ ಕಳಪೆ ಗುಣಮಟ್ಟದ ಉತ್ಪನ್ನಗಳಿಗೆ ಬೆಲೆ ಕಡಿಮೆಯಾಗಿದೆ.
Tamarind Price Surge: ಬರಗಾಲದಲ್ಲೂ ಬಡವರಿಗೆ ಯುಗಾದಿ ಹಬ್ಬ
ಇನ್ನು ಹುಣಸೆ ಬೆಳೆಗೆ ಗ್ರಾಮೀಣ ಭಾಗದಲ್ಲಿ ವಿಶೇಷ ಮನ್ನಣೆ ಇದೆ. ಬರಗಾಲದಲ್ಲೂ ಬಡವರಿಗೆ ಯುಗಾದಿ ಹಬ್ಬ ತರುವ ಬೆಳೆ ಎಂದರೆ ಹುಣಸೆ ಬೆಳೆಯದ್ದು ಎನ್ನುವ ಮಾತು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಇದೆ. ಹುಣಸೆ ಬೆಳೆಯು ಸಾವಿರಾರು ರೈತರಿಗೆ ಬದುಕು ರೂಪಿಸಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹುಣಸೆ ಬೆಳೆಯನ್ನು ಬೆಳೆಯುವ ರೈತರಿಗೆ ಸಹಕಾರ, ನೆರವು ಅವಶ್ಯಕವಾಗಿದೆ.
ಇನ್ನು ಮಳೆ ಆಶ್ರಯದ ಬೆಳೆಗಳಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿಯೂ ಹುಣಸೆಹಣ್ಣು ಗುರುತಿಸಿಕೊಂಡಿದೆ. ಹುಣಸೆಯಲ್ಲಿ ಇದೀಗ ಕೃಷಿ ಕಾರ್ಮಿಕರ ಕೊರತೆ ಹಾಗೂ ಯಂತ್ರಗಳ ಸಮಸ್ಯೆಯು ಪ್ರಮುಖವಾಗಿದೆ. ಕರ್ನಾಟಕ ಸರ್ಕಾರವು ಈ ನಿಟ್ಟಿನಲ್ಲಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/tamarind-price-surge-two-major-challenges-in-tamarind-farming-putting-growers-under-pressure-444979.html. xn--babytilbehr-pgb.com does not claim ownership of this content. All rights remain with the original publisher.
