
India
oi-Manohara M
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸಿರುವ ನಟ ದಳಪತಿ ವಿಜಯ್ (Thalapathy Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 234 ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ ಈ ಪಟ್ಟಿಯಲ್ಲಿ ಎಲ್ಲರ ಕಣ್ಸೆಳೆದಿದ್ದು ವಿಜಯ್ ಅವರ ಹಳೆಯ ಕಾರು ಚಾಲಕನ ಮಗನ ಹೆಸರು. ಸಾಮಾನ್ಯ ಕುಟುಂಬದ ಹಿನ್ನೆಲೆಯುಳ್ಳ ಯುವಕನಿಗೆ ಶಾಸಕ ಸ್ಥಾನದ ಟಿಕೆಟ್ ನೀಡುವ ಮೂಲಕ ವಿಜಯ್ ಅವರು ರಾಜಕೀಯದಲ್ಲಿ ಹೊಸ ಮಾದರಿಯನ್ನು ಸೃಷ್ಟಿಸಿದ್ದಾರೆ. ಕುಟುಂಬ ರಾಜಕಾರಣದಲ್ಲೇ ಮುಳುಗಿರುವ ಪಕ್ಷಗಳಿಗೆ ಹೊಸ ಸಂದೇಶವೂ ರವಾನಿಸಿದ್ದಾರೆ.
ವಿಜಯ್ ತಮಿಳುನಾಡು ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ. ಈ ಪಟ್ಟಿಯಲ್ಲಿ ವಿಜಯ್ ಅವರ ದೀರ್ಘಕಾಲದ ನಂಬಿಕಸ್ತ ಚಾಲಕ ಹಾಗೂ ಪ್ರಸ್ತುತ ಆಪ್ತ ಸಹಾಯಕರಾಗಿರುವ (PA) ರಾಜೇಂದ್ರನ್ ಅವರ ಪುತ್ರ ಶಬರಿನಾಥನ್ ಅವರಿಗೆ ಶಾಸಕ ಸ್ಥಾನದ ಟಿಕೆಟ್ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯವು ರಾಜಕೀಯದ ಆಚೆಗೂ ಜನರ ಮನ ಗೆದ್ದಿದೆ.

ವೇದಿಕೆಯಲ್ಲೇ ಕಣ್ಣೀರಿಟ್ಟ ಅಭ್ಯರ್ಥಿ
ಚೆನ್ನೈನಲ್ಲಿ ನಡೆದ ಅಭ್ಯರ್ಥಿಗಳ ಘೋಷಣೆಯ ಕಾರ್ಯಕ್ರಮದಲ್ಲಿ ಶಬರಿನಾಥನ್ ತನ್ನ ಹೆಸರನ್ನು ಪ್ರಕಟಿಸುತ್ತಿದ್ದಂತೆಯೇ, ಅಲ್ಲಿದ್ದವರು ಕ್ಷಣಕಾಲ ಮೌನವಾದರು. ತನ್ನ ತಂದೆ ಚಾಲಕನಾಗಿ ಸೇವೆ ಸಲ್ಲಿಸಿದ ಕುಟುಂಬದ ಕುಡಿಗೆ ಇಷ್ಟು ದೊಡ್ಡ ಜವಾಬ್ದಾರಿ ಸಿಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಈ ಘೋಷಣೆಯನ್ನು ಕೇಳಿದ ತಂದೆ ರಾಜೇಂದ್ರನ್ ಮತ್ತು ಮಗ ಶಬರಿನಾಥನ್ ಇಬ್ಬರೂ ಭಾವುಕರಾಗಿ ವೇದಿಕೆಯ ಮೇಲೆಯೇ ಕಣ್ಣೀರು ಹಾಕತೊಡಗಿದರು. ವೇದಿಕೆ ಕಾರ್ಯಕ್ರಮವಂತೂ ಅತ್ಯಂತ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
Emotional Moment @ActorVijay Naa Personal Driver ‘Rajendran’ & His SON #Sabrinathan ! 🥹🫂 pic.twitter.com/59VVN0bCCS
— Prakash Vijay (@PrakazVijay_Of) March 29, 2026
ತನ್ನ ಹೆಸರನ್ನು ಅಭ್ಯರ್ಥಿಯಾಗಿ ಕೇಳುತ್ತಿದ್ದಂತೆಯೇ ಆ ಯುವಕ ವೇದಿಕೆಯ ಮೇಲೆಯೇ ಅತಿಯಾದ ಸಂಭ್ರಮ ಮತ್ತು ಭಾವುಕತೆಯಿಂದ ಕಣ್ಣೀರು ಹಾಕಿದ್ದಾನೆ. ತನ್ನ ತಂದೆ ಒಬ್ಬ ಚಾಲಕನಾಗಿ ಕೆಲಸ ಮಾಡಿದ ಕುಟುಂಬಕ್ಕೆ ಇಷ್ಟು ದೊಡ್ಡ ಜವಾಬ್ದಾರಿ ಸಿಕ್ಕಿದ್ದನ್ನು ಕಂಡು ಆತ ಮೂಕವಿಸ್ಮಿತನಾಗಿದ್ದಾನೆ. ಈ ವೇಳೆ ತಕ್ಷಣವೇ ಪ್ರತಿಕ್ರಿಯಿಸಿದ ವಿಜಯ್ ಅವರು, ಆ ಯುವಕನ ಹತ್ತಿರಕ್ಕೆ ಬಂದು ಪ್ರೀತಿಯಿಂದ ಆತನ ಕಣ್ಣೀರನ್ನು ಒರೆಸಿ ಸಮಾಧಾನಪಡಿಸಿದರು.
ವಿಜಯ್ ನಡೆಗೆ ಮೆಚ್ಚುಗೆ
ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ವಿಜಯ್ ಅವರ ಮಾನವೀಯ ಗುಣ ಮತ್ತು ಸಾಮಾನ್ಯ ಕಾರ್ಯಕರ್ತರಿಗೆ ಅವರು ನೀಡುತ್ತಿರುವ ಆದ್ಯತೆಗೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ಕೇವಲ ಹಣವಂತರಿಗೆ ಅಥವಾ ರಾಜಕೀಯ ಹಿನ್ನೆಲೆ ಇರುವವರಿಗೆ ಮಾತ್ರ ಟಿಕೆಟ್ ನೀಡುವ ಸಂಪ್ರದಾಯವನ್ನು ಮುರಿದು, ಪ್ರಾಮಾಣಿಕವಾಗಿ ಕೆಲಸ ಮಾಡುವ ಸಾಮಾನ್ಯರಿಗೂ ಅವಕಾಶ ನೀಡಬೇಕು ಎಂಬ ವಿಜಯ್ ಅವರ ನಿಲುವಿಗೆ ತಮಿಳುನಾಡಿನ ಜನತೆ ಫಿದಾ ಆಗಿದ್ದಾರೆ.
ಈ ಭಾವುಕ ಕ್ಷಣವು ಟಿವಿಕೆ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದೆ. ಚಾಲಕನ ಮಗ ಶಾಸಕನಾಗುವ ಕನಸು ಕಾಣಬಹುದು ಎನ್ನುವುದನ್ನು ವಿಜಯ್ ಅವರು ಸಾಬೀತುಪಡಿಸಿದ್ದಾರೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಈ ಯುವ ಅಭ್ಯರ್ಥಿಯ ಗೆಲುವು ಪಕ್ಷಕ್ಕೆ ಒಂದು ದೊಡ್ಡ ಮೈಲಿಗಲ್ಲಾಗಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/actor-thalapathy-vijay-gives-ticket-to-his-drivers-son-from-tvk-party-tamil-nadu-election-2026-448823.html. xn--babytilbehr-pgb.com does not claim ownership of this content. All rights remain with the original publisher.
