Trump: 48 ಗಂಟೆಗಳಲ್ಲಿ ಹಾರ್ಮುಜ್ ತೆರೆಯಿರಿ, ಇಲ್ಲದಿದ್ದರೆ ಸರ್ವನಾಶ ನಿಶ್ಚಿತ: ಇರಾನ್‌ಗೆ ಟ್ರಂಪ್ ಅಂತಿಮ ಎಚ್ಚರಿಕೆ | Donald Trump Gives 48 Hour Ultimatum to Iran to reopen the Strait of Hormuz or face consequences

International

oi-Manohara M

ಹಾರ್ಮುಜ್ ಜಲಸಂಧಿಯ ದಿಗ್ಬಂಧನವನ್ನು ತೆರವುಗೊಳಿಸಲು ಅಥವಾ ಶಾಂತಿ ಒಪ್ಪಂದಕ್ಕೆ ಬರಲು ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಕೊನೆಯ 48 ಗಂಟೆಗಳ ಕಾಲಾವಕಾಶ ನೀಡಿದ್ದಾರೆ. “ಸಮಯ ಮೀರುತ್ತಿದೆ, ಈ ಗಡುವು ಮುಗಿದ ನಂತರ ಇರಾನ್ ಮೇಲೆ ನರಕವೇ ಕುಸಿಯಲಿದೆ” ಎಂದು ಅವರು ಗುಡುಗಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ‘ಟ್ರೂತ್ ಸೋಶಿಯಲ್’ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಇರಾನ್‌ಗೆ ಒಪ್ಪಂದ ಮಾಡಿಕೊಳ್ಳಲು ಅಥವಾ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ನಾನು 10 ದಿನಗಳ ಸಮಯ ನೀಡಿದ್ದೆ. ಈಗ ಕೇವಲ 48 ಗಂಟೆಗಳು ಮಾತ್ರ ಬಾಕಿ ಇವೆ. ಆನಂತರ ಅವರ ಮೇಲೆ ‘ಸರ್ವನಾಶ’ ಆರಂಭವಾಗಲಿದೆ” ಎಂದು ಎಚ್ಚರಿಸಿದ್ದಾರೆ.

ಈ ಗಡುವು ಅಮೆರಿಕದ ಸಮಯದ ಪ್ರಕಾರ ಸೋಮವಾರ (ಏಪ್ರಿಲ್ 6) ರಾತ್ರಿ 8 ಗಂಟೆಗೆ ಮುಕ್ತಾಯವಾಗಲಿದೆ. ನಿಗದಿತ ಸಮಯದೊಳಗೆ ಇರಾನ್ ತನ್ನ ಪಟ್ಟು ಸಡಿಲಿಸದಿದ್ದರೆ ಅವರ ಮೇಲೆ ನರಕವೇ ಮಳೆ ರೂಪದಲ್ಲಿ ಸುರಿಯಲಿದೆ ಎಂದು ಟ್ರಂಪ್ ಹೇಳಿದ್ದಾರೆ. ವಿಶ್ವದ ಒಟ್ಟು ತೈಲ ಮತ್ತು ಎಲ್‌ಪಿಜಿ (LPG) ಸರಬರಾಜಿನ ಸುಮಾರು 20% ರಷ್ಟು ಈ ಜಲಸಂಧಿಯ ಮೂಲಕವೇ ಸಾಗುತ್ತದೆ. ಇರಾನ್ ಇದನ್ನು ಬಂದ್ ಮಾಡಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರಿದೆ.

Donald Trump

ಇತ್ತೀಚೆಗಷ್ಟೇ ಇರಾನ್ ಅಮೆರಿಕದ F-15 ಯುದ್ಧವಿಮಾನವನ್ನು ಹೊಡೆದುರುಳಿಸಿರುವುದು ಉಭಯ ದೇಶಗಳ ನಡುವಿನ ಕೆಂಡದಂತಹ ವಾತಾವರಣಕ್ಕೆ ತುಪ್ಪ ಸುರಿದಂತಾಗಿದೆ. ಒಂದು ವೇಳೆ ಇರಾನ್ ಜಲಸಂಧಿಯನ್ನು ತೆರೆಯದಿದ್ದರೆ, ಆ ದೇಶದ ಅತಿದೊಡ್ಡ ವಿದ್ಯುತ್ ಸ್ಥಾವರಗಳನ್ನು ಮತ್ತು ಇಂಧನ ಮೂಲಗಳನ್ನು ನಾಶಪಡಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಟ್ರಂಪ್ ಅವರ ಈ ಎಚ್ಚರಿಕೆಗೆ ಇರಾನ್ ಕೂಡ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. “ಅಮೆರಿಕ ಏನಾದರೂ ನಮ್ಮ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದರೆ, ಈ ಪ್ರಾಂತ್ಯದಲ್ಲಿರುವ ಅಮೆರಿಕದ ಎಲ್ಲ ಮಿಲಿಟರಿ ನೆಲೆಗಳು ಮತ್ತು ಇಂಧನ ಕೇಂದ್ರಗಳ ಮೇಲೆ ನಾವು ದಾಳಿ ಮಾಡುತ್ತೇವೆ ಎಂದು ಇರಾನ್‌ನ ಪಡೆ IRGC ಎಚ್ಚರಿಸಿದೆ.

ಟ್ರಂಪ್ ಅವರ ಈ ’48 ಗಂಟೆಗಳ’ ಎಚ್ಚರಿಕೆಯ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ಮತ್ತು ತೈಲ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಅಥವಾ ಏರುಪೇರಾಗುವ ಭೀತಿ ಎದುರಾಗಿದೆ. ಸೋಮವಾರ ಮಾರುಕಟ್ಟೆ ಆರಂಭವಾಗುವ ಹೊತ್ತಿಗೆ ಈ ಗಡುವು ಮುಗಿಯುತ್ತಿರುವುದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಅತ್ಯಂತ ಉದ್ವಿಗ್ನಗೊಂಡಿದೆ. ಇರಾನ್‌ನ ಇಂಧನ ಮೂಲಸೌಕರ್ಯಗಳು ಮತ್ತು ತೈಲ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಅಮೆರಿಕ ಸಿದ್ಧತೆ ನಡೆಸಿತ್ತು. ಮೊದಲು ನೀಡಲಾಗಿದ್ದ ಗಡುವು ತೀರಾ ಹತ್ತಿರದಲ್ಲಿದ್ದ ಕಾರಣ, ಇರಾನ್ ಅಧಿಕಾರಿಗಳು ಅಮೆರಿಕದ ಆಡಳಿತವನ್ನು ಸಂಪರ್ಕಿಸಿ ಮಾತುಕತೆಗಾಗಿ ಹೆಚ್ಚಿನ ಸಮಯ ಕೋರಿದ್ದರು ಎನ್ನಲಾಗಿದೆ.

ಇರಾನ್‌ನ ತೈಲ ಕೇಂದ್ರಗಳ ಮೇಲೆ ದಾಳಿ ನಡೆದರೆ ಜಾಗತಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುವ ಸಾಧ್ಯತೆಯಿದೆ. ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಉಂಟಾದರೆ ಭಾರತದಂತಹ ದೇಶಗಳ ಆಮದು ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಏಪ್ರಿಲ್ 6ರ ಒಳಗೆ ಯಾವುದೇ ರಾಜತಾಂತ್ರಿಕ ಪರಿಹಾರ ಸಿಗದಿದ್ದರೆ, ಇದು ಪೂರ್ಣ ಪ್ರಮಾಣದ ಪ್ರಾದೇಶಿಕ ಯುದ್ಧಕ್ಕೆ ನಾಂದಿ ಹಾಡಬಹುದು ಎಂಬ ಆತಂಕ ತಜ್ಞರಲ್ಲಿದೆ. ಏಪ್ರಿಲ್ 6ರ ಸೋಮವಾರದವರೆಗೆ ಇರಾನ್ ಯಾವ ನಿರ್ಧಾರ ತಳೆಯುತ್ತದೆ ಎನ್ನುವುದರ ಮೇಲೆ ಮುಂದಿನ ಯುದ್ಧ ಅಥವಾ ಶಾಂತಿಯ ಹಾದಿ ನಿರ್ಧಾರವಾಗಲಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/donald-trump-gives-48-hour-ultimatum-to-iran-to-reopen-the-strait-of-hormuz-or-face-consequences-449381.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo