UPSC ಪೂರ್ವಭಾವಿ ಪರೀಕ್ಷೆ ಮುಗಿದ ತಕ್ಷಣವೇ ಕೀ ಉತ್ತರಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ನಿರ್ಧಾರ | UPSC Prelims 2026: Provisional Answer Keys to be Released Immediately After Exam for Transparency

India

oi-Pragathi S

ನವದೆಹಲಿ: ದೇಶದ ಅತ್ಯಂತ ಕಠಿಣ ಹಾಗೂ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿ (UPSC) ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯುವ ಲಕ್ಷಾಂತರ ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ, ಅಂದರೆ 2026ರ ಸಾಲಿನಿಂದ, ಯುಪಿಎಸ್‌ಸಿ ಪ್ರಿಲಿಮಿನರಿ (ಪೂರ್ವಭಾವಿ) ಪರೀಕ್ಷೆ ಮುಗಿದ ತಕ್ಷಣವೇ ತಾತ್ಕಾಲಿಕ ಕೀ ಉತ್ತರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದೆ.

ಸಚಿವ ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರದ ಮೂಲಕ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಪರೀಕ್ಷಾ ವ್ಯವಸ್ಥೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಯುಪಿಎಸ್‌ಸಿ ಹೊಸ ಮಾರ್ಗಸೂಚಿಗಳನ್ನು ರೂಪಿಸಿದ್ದು, 2026ರ ಸಿವಿಲ್ ಸರ್ವಿಸ್ ಪ್ರಿಲಿಮ್ಸ್ ಪರೀಕ್ಷೆಯಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಕೇವಲ ಸಿವಿಲ್ ಸರ್ವಿಸ್ ಮಾತ್ರವಲ್ಲದೆ, ಆಯೋಗ ನಡೆಸುವ ಎಲ್ಲಾ ವ್ಯವಸ್ಥಿತ ಪರೀಕ್ಷೆಗಳಿಗೂ ಇದು ಅನ್ವಯವಾಗಲಿದೆ.

UPSC

ಕೀ ಉತ್ತರ ಮಾತ್ರ, ಅಂತಿಮ ಅಂಕಗಳಲ್ಲ

ಸಚಿವರು ಸ್ಪಷ್ಟಪಡಿಸಿರುವಂತೆ, ಪರೀಕ್ಷೆ ಮುಗಿದ ಕೂಡಲೇ ಕೇವಲ ‘ತಾತ್ಕಾಲಿಕ ಕೀ ಉತ್ತರ’ಗಳನ್ನು ಮಾತ್ರ ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗಳು ತಾವು ಬರೆದ ಉತ್ತರಗಳನ್ನು ಕೂಡಲೇ ಪರಿಶೀಲಿಸಿಕೊಳ್ಳಬಹುದು. ಆದರೆ, ಪ್ರಿಲಿಮ್ಸ್ ಪರೀಕ್ಷೆಯ ಅಂತಿಮ ಅಂಕಗಳನ್ನು ಸಂಪೂರ್ಣ ಆಯ್ಕೆ ಪ್ರಕ್ರಿಯೆ (ಅಂದರೆ ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನ) ಮುಗಿದು ಅಂತಿಮ ಫಲಿತಾಂಶ ಪ್ರಕಟವಾದ ನಂತರವೇ ಬಹಿರಂಗಪಡಿಸಲಾಗುತ್ತದೆ. ಐಎಎಸ್ (IAS), ಐಎಫ್ಎಸ್ (IFS) ಮತ್ತು ಐಪಿಎಸ್ (IPS) ನಂತಹ ಉನ್ನತ ಹುದ್ದೆಗಳಿಗೆ ನಡೆಯುವ ಈ ನೇಮಕಾತಿ ಪ್ರಕ್ರಿಯೆಯಲ್ಲಿ, ಅಭ್ಯರ್ಥಿಗಳಿಗೆ ತಮ್ಮ ಮುಂದಿನ ಹಂತದ ತಯಾರಿಯನ್ನು ನಿಖರವಾಗಿ ಯೋಜಿಸಿಕೊಳ್ಳಲು ಈ ನಿರ್ಧಾರ ಸಹಾಯ ಮಾಡಲಿದೆ.

ವಿವಿಧ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ತಡೆಯಲು ಯುಪಿಎಸ್‌ಸಿ ‘ಇಂಟರ್-ಸಬ್ಜೆಕ್ಟ್ ಮಾಡರೇಷನ್’ (ಅಂತರ-ವಿಷಯ ಸಮತೋಲನ) ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದೆ. ಈ ಮೌಲ್ಯಮಾಪನ ಮತ್ತು ಅಂಕಗಳ ಸಮತೋಲನದ ಬಗ್ಗೆ ಆಯೋಗದ ವೆಬ್‌ಸೈಟ್‌ನಲ್ಲಿ ವಿವರವಾದ ಮಾಹಿತಿಯನ್ನು ನೀಡಲಾಗಿದ್ದು, ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ನಿಖರತೆ ಕಾಯ್ದುಕೊಳ್ಳಲು ಆಯೋಗ ಬದ್ಧವಾಗಿದೆ ಎಂದು ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಇದರ ಜೊತೆಗೆ ಗ್ರಾಮೀಣ ಭಾಗದ ಮತ್ತು ಕನ್ನಡ ಮಾಧ್ಯಮದ ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸುವ ಸಿ-ಸ್ಯಾಟ್ ಪತ್ರಿಕೆಯ ಬಗ್ಗೆಯೂ ಸಚಿವರು ಸ್ಪಷ್ಟನೆ ನೀಡಿದ್ದಾರೆ. “ಸಿ-ಸ್ಯಾಟ್ ಕೇವಲ ಒಂದು ಅರ್ಹತಾ ಪತ್ರಿಕೆಯಾಗಿದೆ. ಅಭ್ಯರ್ಥಿಗಳ ಕನಿಷ್ಠ ವಿಶ್ಲೇಷಣಾ ಸಾಮರ್ಥ್ಯವನ್ನು ಪರೀಕ್ಷಿಸುವುದು ಇದರ ಏಕೈಕ ಉದ್ದೇಶ. ಇದರಲ್ಲಿ ಕೇಳಲಾಗುವ ಪ್ರಶ್ನೆಗಳು ಕೇವಲ 10ನೇ ತರಗತಿ ಮಟ್ಟದಲ್ಲಿರುತ್ತವೆ” ಎಂದು ಅವರು ಅಭ್ಯರ್ಥಿಗಳ ಆತಂಕವನ್ನು ದೂರ ಮಾಡಿದ್ದಾರೆ.

ಆಕ್ಷೇಪಣೆ ಸಲ್ಲಿಸಲು ಹೊಸ ಪೋರ್ಟಲ್ (QPRep)

ಪರೀಕ್ಷೆಯ ಪ್ರಶ್ನೆ ಪತ್ರಿಕೆ ಅಥವಾ ಬಿಡುಗಡೆಯಾದ ತಾತ್ಕಾಲಿಕ ಕೀ ಉತ್ತರಗಳ ಬಗ್ಗೆ ಅಭ್ಯರ್ಥಿಗಳಿಗೆ ಏನಾದರೂ ಆಕ್ಷೇಪಣೆಗಳಿದ್ದರೆ, ಅದನ್ನು ವ್ಯವಸ್ಥಿತವಾಗಿ ಸಲ್ಲಿಸಲು ಯುಪಿಎಸ್‌ಸಿ ‘QPRep’ (Question Paper Representation Portal) ಎಂಬ ಹೊಸ ವೇದಿಕೆಯನ್ನು ಸೃಷ್ಟಿಸಿದೆ. 2026ರಿಂದ ಅಭ್ಯರ್ಥಿಗಳು ಈ ಪೋರ್ಟಲ್ ಮೂಲಕ ನೇರವಾಗಿ ತಮ್ಮ ಆಕ್ಷೇಪಣೆಗಳನ್ನು ದಾಖಲಿಸಬಹುದು. ಇದಲ್ಲದೆ, CPGRAMS ಮತ್ತು ಇಮೇಲ್ ಮೂಲಕವೂ ದೂರುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕದಿಂದಲೂ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾಗುತ್ತಾರೆ. ಈ ಹಿಂದೆ, ಕೀ ಉತ್ತರಗಳು ತಡವಾಗಿ ಪ್ರಕಟವಾಗುತ್ತಿದ್ದ ಕಾರಣ, ತಾವು ಪ್ರಿಲಿಮ್ಸ್ ಪಾಸ್ ಆಗುತ್ತೇವೆಯೋ ಇಲ್ಲವೋ ಎಂಬ ಗೊಂದಲದಲ್ಲಿಯೇ ಅಭ್ಯರ್ಥಿಗಳು ಮೇನ್ಸ್ ಪರೀಕ್ಷೆಗೆ ಸಿದ್ಧತೆ ನಡೆಸಬೇಕಾಗಿತ್ತು. ಈ ಅನಿಶ್ಚಿತತೆಯಿಂದಾಗಿ ಅನೇಕರ ಅಮೂಲ್ಯ ಸಮಯ ಹಾಗೂ ಶ್ರಮ ವ್ಯರ್ಥವಾಗುತ್ತಿತ್ತು. ಆದರೆ, 2026 ರಿಂದ ಜಾರಿಗೆ ಬರಲಿರುವ ಈ ಹೊಸ ನಿಯಮವು ಆಕಾಂಕ್ಷಿಗಳ ಪಾಲಿಗೆ ವರದಾನವಾಗಲಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/upsc-prelims-2026-provisional-answer-keys-to-be-released-immediately-after-exam-for-transparency-448155.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo