
Sports
oi-Madhusudhan KR
Vaibhav Suryavanshi: ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಸ್ಟಾರ್ ಆಟಗಾರ ವೈಭವ್ ಸೂರ್ಯವಂಶಿ ಕುರಿತು ಅವರ ಬಾಲ್ಯದ ತರಬೇತುದಾರ (Coach) ಮನೀಶ್ ಓಜಾ ಅವರು ಆಸಕ್ತಿದಾಯಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಐಪಿಎಲ್ 2026 ಆರಂಭಕ್ಕೂ ಮುನ್ನವೇ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಆದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದು ಸಖತ್ ಸದ್ದು ಮಾಡುತ್ತಿದೆ.
“ವೈಭವ್ ಸೂರ್ಯವಂಶಿ 2018ರಲ್ಲಿ ಮೊದಲ ಬಾರಿಗೆ ಅಕಾಡೆಮಿಗೆ ಬಂದಾಗಲೇ ಅವರು ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಆರಂಭದಿಂದಲೂ ಅವರಿಗೆ ಚೆಂಡನ್ನು ಬಲವಾಗಿ ಬಾರಿಸುವುದು ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಮಾಡುವುದೆಂದರೆ ಆತನಿಗೆ ಪಂಚಪ್ರಾಣ,” ಎಂದು ಮನೀಶ್ ಓಜಾ ಅವರು ಹೇಳಿದ್ದಾರೆ.

ನೆಟ್ಸ್ನಲ್ಲಿ ವೈಭವ್ ಅಭ್ಯಾಸದ ರೀತಿ ಹೇಗಿತ್ತು?
“ವೈಭವ್ ನೆಟ್ಸ್ನಲ್ಲಿ ಸಾಕಷ್ಟು ಪರಿಶ್ರಮ ಹಾಕಿ ಅಭ್ಯಾಸ ಮಾಡುತ್ತಿದ್ದರು. ಪ್ರತಿ ಸೆಶನ್ನಲ್ಲಿ ಅವರು ಸುಮಾರು 400 ರಿಂದ 500 ಎಸೆತಗಳನ್ನು ಎದುರಿಸುತ್ತಿದ್ದರು. ಕೋಚ್ ವಿರಾಮ ನೀಡುವವರೆಗೂ ಅವರು ಬ್ಯಾಟಿಂಗ್ ನಿಲ್ಲಿಸುತ್ತಿರಲಿಲ್ಲ,” ಎಂದು ಮನೀಶ್ ಓಜಾ ಅವರು ನೆನಪಿಸಿಕೊಂಡಿದ್ದಾರೆ.
ವೈಭವ್ ಸೂರ್ಯವಂಶಿ ಧೈರ್ಯಕ್ಕೆ ಕೋಚ್ ಮೆಚ್ಚುಗೆ
“2022ರ ಅಭ್ಯಾಸದ ಸಮಯದಲ್ಲಿ ವೈಭವ್ಗೆ ಕೇವಲ ಬಿಗ್ ಶಾಟ್ಗಳನ್ನು ಮಾಡಬೇಡ. ಸಿಂಗಲ್ಸ್ ಮತ್ತು ಡಬಲ್ಸ್ ರನ್ ತೆಗೆದುಕೊಳ್ಳುವತ್ತ ಗಮನ ಹರಿಸು ಎಂದು ಸಲಹೆ ನೀಡುತ್ತಿದ್ದೆ. ಆಗ ವೈಭವ್ ಸರ್ ಆ ಎಸೆತದಲ್ಲಿ ನಾನು ಸಿಕ್ಸರ್ ಹೊಡೆಯಲು ಸಾಧ್ಯವಿರುವಾಗ ಸಿಂಗಲ್ ಏಕೆ ತೆಗೆದುಕೊಳ್ಳಬೇಕು?” ಎಂದು ಕೇಳುತ್ತಿದ್ದ. ಅವರ ಈ ಧೈರ್ಯದಿಂದ ತುಂಬಾ ಖುಷಿಯಾಗುತ್ತಿತ್ತು,” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಇದೀಗ ಭಾರೀ ವೈರಲ್ ಆಗುತ್ತಿದೆ.
“ರಾಜಸ್ಥಾನ್ ರಾಯಲ್ಸ್ ತಂಡದ ಟ್ರಯಲ್ಸ್ ಸಮಯದಲ್ಲಿ ವೈಭವ್ಗೆ ಕಠಿಣ ಗುರಿಗಳನ್ನು ನೀಡಲಾಗಿತ್ತು. ಉದಾಹರಣೆಗೆ, ಒಂದು ಓವರ್ನಲ್ಲಿ 18 ರನ್ ಹೊಡೆಯುವ ಗುರಿಯನ್ನು ಅವರು ಕೇವಲ 3 ಎಸೆತಗಳಲ್ಲಿ ಪೂರೈಸಿದ್ದರು. ಮತ್ತೊಂದು ಟ್ರಯಲ್ನಲ್ಲಿ ಒಂದು ಓವರ್ಗೆ 24 ರನ್ ಬೇಕಿದ್ದಾಗ ಕೇವಲ 5 ಎಸೆತಗಳಲ್ಲಿ ಅದನ್ನು ಸಾಧಿಸಿದ್ದರು,” ಎಂದು ಹೇಳಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ಧ ಮಿಂಚಿದ್ದ ವೈಭವ್
ವೈಭವ್ ಸೂರ್ಯವಂಶಿ ಅವರು 2025ರ ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ (14 ವರ್ಷ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಲ್ಲದೆ, ಇತ್ತೀಚೆಗೆ ನಡೆದ ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 80 ಎಸೆತಗಳಲ್ಲಿ 15 ಬೌಂಡರಿ, 15 ಸಿಕ್ಸರ್ಗಳೊಂದಿಗೆ 175 ರನ್ ಸಿಡಿಸಿ ಭಾರತದ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು. ಇದೀಗ ಈ 15ರ ಹರೆಯದ ಯುವ ಪ್ರತಿಭೆ ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರದ ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/vaibhav-suryavanshi-childhood-coach-reveals-inspiring-journey-of-rr-s-15-year-old-star-batter-448991.html. xn--babytilbehr-pgb.com does not claim ownership of this content. All rights remain with the original publisher.
