Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video | Tragedy at Barh Station: Man Hit by Vande Bharat Express While Spitting Near Platform Edge Dies

India

oi-Shankrappa Parangi

ಪಾಟ್ನಾ: ಮನುಷ್ಯನಿಗೆ ಸಾವು ಯಾವ ರೀತಿ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಇಲ್ಲೊಬ್ಬ ವ್ಯಕ್ತಿ ಬಾಯಲ್ಲಿ ಅಗಿಯುತ್ತಿದ್ದ ತಂಬಾಕು ಉಗಿಯಲು ಮುಂದಾದ ವೇಳೆ ವೇಗವಾಗಿ ಬರುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಪೂರ್ವ ಮಧ್ಯ ರೈಲ್ವೆ (ಇಸಿಆರ್) ವ್ಯಾಪ್ತಿಯ ದಾನಾಪುರ ವಿಭಾಗದ ಬರ್ಹ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಪೂರ್ವ ಮಧ್ಯ ರೈಲ್ವೆ (ಇಸಿಆರ್)ನ ದಾನಾಪುರ ವಿಭಾಗದ ಬರ್ಹ್ ರೈಲ್ವೆ ನಿಲ್ದಾಣಕ್ಕೆ ಪಾಟ್ನಾ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಗವಾಗಿ ಬರುತ್ತಿತ್ತು. ಈ ರೈಲು ಪ್ಲಾಟ್‌ಫಾರ್ಮ್‌ ತುದಿಯಲ್ಲಿ ನಿಂತು ಹಳಿಯತ್ತ ಮುಖ ಮಾಡಿ ತಂಬಾಕು ಉಗಿಯುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪ್ಲಾಟ್‌ಫಾರ್ಮ್ ಸಂಖ್ಯೆ 2 ರಲ್ಲಿ ನಡೆದಿದೆ.

Tragedy at Barh Station

ಸೆಮಿ-ಹೈಸ್ಪೀಡ್ ರೈಲು ಪ್ಲಾಟ್‌ಫಾರ್ಮ್‌ನತ್ತ ಬರುತ್ತಿದ್ದಂತೆ ಬಲಿಪಶು ವ್ಯಕ್ತಿ ತಂಬಾಕು ಅಗಿಯಲು ಪ್ಲಾಟ್‌ಫಾರ್ಮ್ ಅಂಚಿಗೆ ಬಂದಿದ್ದಾರೆ. ಪ್ಲಾಟ್‌ಫಾರ್ಮ್‌ ತುದಿಗೆ ಬರುತ್ತಿದ್ದಂತೆ ಉಗಿಯಲು ಮುಂದಾಗಿದ್ದಾರೆ. ಆಗ ವೇಗವಾಗಿ ಬಂದ ರೈಲು ಅವರಿಗೆ ಡಿಕ್ಕಿ ಹೊಡೆದಿದೆ. ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು ಕೆಲವೇ ಹೊತ್ತಿನಲ್ಲಿ ಅವರು ಮೃತಪಟ್ಟ ಧಾರುಣ ಘಟನೆ ನಡೆದಿದೆ ಎಂದು ದಾನಾಪುರ ಆರ್‌ಪಿಎಫ್ ಕಮಾಂಡೆಂಟ್ ಉದಯ್ ಸಿಂಗ್ ಪವಾರ್ ಅವರು ತಿಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ಕಾಣುವಂತೆ ರೈಲು ದೂರದಲ್ಲಿ ಬರುತ್ತಿರುವುದು ಕಾಣುತ್ತದೆ. ಮತ್ತೊಂದೆಡೆ ಪ್ಲಾಟ್‌ಫಾರ್ಮ್‌ನಲ್ಲಿ ಕೂತಿದ್ದ ವ್ಯಕ್ತಿ ರೈಲು ಬರುವುದನ್ನು ನೋಡದೇ ಸೀದಾ ಹಳಿಯ ಕಡೆಗೆ ಬಂದು ಇನ್ನೇನು ಕೊಂಚ ಬಗ್ಗಿ ತಂಬಾಕು ಉಗಿಯುವಷ್ಟರಲ್ಲಿ ರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಎತ್ತಿ ಬಿಸಾಡಿದಂತೆ ಕೊಂಚ ದೂರ ಹೋಗಿ ಬಿದಿದ್ದಾರೆ.

ಬಾರ್ಹ್ ಆರ್‌ಪಿಎಫ್ ಮತ್ತು ಜಿಆರ್‌ಪಿ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದು ಗಾಯಾಳು ವ್ಯಕ್ತಿಯನ್ನು ಬರ್ಹ್ ಸದರ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತೀವ್ರ ಗಾಯಗಳಾಗಿದ್ದರಿಂದ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಚಿಕಿತ್ಸೆಗೆ ಅವರು ಸ್ಪಂದಿಸದೇ ಅಸುನೀಗಿದರು ಎಂದು ಭಕ್ತಿಯಾರ್‌ಪುರ ಆರ್‌ಪಿಎಫ್ ಇನ್ಸ್‌ಪೆಕ್ಟರ್ ಜವಾಹರ್ ಲಾಲ್ ಮಾಹಿತಿ ಕೊಟ್ಟರು.

ಪ್ಲಾಟ್‌ಫಾರ್ಮ್‌ಗಳಲ್ಲಿ ಅಧಿಕಾರಿಗಳಿಂದ ಅರಿವು

ಘಟನೆಗೆ ಸಂಬಂಧಿಸಿದಂತೆ ಬಾರ್ಹ್‌ನ ಜಿಆರ್‌ಪಿ ಅಧಿಕಾರಿಗಳು ಅಸ್ವಾಭಾವಿಕ ಸಾವು ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವ್ಯಕ್ತಿಯ ಮನಸ್ಥಿತಿ, ಬೇಕು ಅಂತಲೇ ರೈಲ್ವೆ ಟ್ರ್ಯಾಕ್ ಬಳಿ ಬಂದಿದ್ದಾ? ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ರೈಲು ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ಪ್ಲಾಟ್‌ಫಾರ್ಮ್‌ಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ದಾನಾಪುರ ವಿಭಾಗದ ರೈಲ್ವೆ ಅಧಿಕಾರಿಗಳು ಅರಿವು ಮೂಡಿಸಲಿದ್ದಾರೆ. ಧ್ವನಿವರ್ಧಕ ಮೂಲಕ ತಿಳಿಸಲು ಮುಂದಾಗಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/india/tragedy-at-barh-station-man-hit-by-vande-bharat-express-while-spitting-near-platform-edge-dies-448421.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo