
India
oi-Shankrappa Parangi
ಚೆನ್ನೈ: ತಮಿಳಿಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮತ್ತು ಖ್ಯಾತ ತಮಿಳು ನಟ ವಿಜಯ್ ದಳಪತಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದಕ್ಕಾಗಿ ಅವರ ವಿರುದ್ಧ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಜಯ್ ಸೋಮವಾರ (ಮಾ.30) ಚುನಾವಣಾ ಪ್ರಚಾರ ಅಭಿಯಾನ ನಡೆಸಿದ್ದರು. ಇದರಿಂದ ಚುನಾವಣಾ ನಿಯಮ ಉಲ್ಲಂಘನೆ ಆಗಿದೆ ಎಂದು ವಿಜಯ್ ವಿರುದ್ಧ ದೂರು ನೀಡಲಾಗಿದೆ.
ವಿಜಯ್ ಅವರು ತಮಿಳುನಾಡಿನ ಪೆರಂಬೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಈ ಸಂಬಂಧ ಸೋಮವಾರ ನಾಮಪತ್ರ ಸಹ ಸಲ್ಲಿಸಿದರು. ಕ್ಷೇತ್ರದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು ಹೆಚ್ಚು ಜನ ಸೇರಿಸಿ ಕ್ಯಾಂಪೇನ್ ಮಾಡಿದ್ದಕ್ಕಾಗಿ ಅವರ ವಿರುದ್ಧ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಕುಮಾರ್ ದೂರು ನೀಡಿದ್ದಾರೆ. ಅದರ ಆಧಾರದಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಸೇರಿದಂತೆ ಐದು ವಿಭಾಗಗಳ ಅಡಿಯಲ್ಲಿ ವಿಜಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ಭದ್ರತಾ ಸಮಸ್ಯೆ ಉಂಟಾಗಬಹುದೆಂಬ ಕಾರಣಕ್ಕೆ ವಿಜಯ್ ಅವರು ಪೂರ್ವ ನಿಗದಿಯಂತೆ ಈಗಾಗಲೇ ಆಯೋಜಿಸಲಾಗಿದ್ದ ಎರಡು ಕಡೆಗೆ ನಡೆಯಬೇಕಿದ್ದ ಚುನಾವಣೆ ಪ್ರಚಾರ ಕಾರ್ಯವನ್ನು ರದ್ದುಗೊಳಿಸಿದ್ದಾರೆ.
ನಿಯಮ ಉಲ್ಲಂಘನೆ ಆಗಿದ್ದೇಗೆ?
ಸೋಮವಾರ ವಿಜಯ್ ಅವರು ರ್ಯಾಲಿ ವೇಳೆ 30 ಧ್ವನಿವರ್ಧಕ ಬಳಸಿದ್ದಾರೆ. ಆಂಬುಲೆನ್ಸ್ಗೆ ದಾರಿ ಬಿಡದೇ ಬ್ಲಾಕ್ ಮಾಡಿದ್ದಾರೆ. 5000ಕ್ಕೂ ಹೆಚ್ಚು ಜನರನ್ನು ಗುಂಪುಗೂಡಿಸಿ ಕಾರ್ಯಕ್ರಮ ಮಾಡಿದ್ದಾರೆ. ಇದರಿಂದ ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆ ಉಂಟು ಮಾಡಿದ್ದಾರೆ. ಒಟ್ಟಾರೆ ಚುನಾವಣಾ ಮಾದರಿ ನೀತಿ ಸಂಹಿತಿ ಉಲ್ಲಂಘಿಸಿದ್ದಾರೆಂದು ಆರೋಪಿಸಿ ದೂರು ನೀಡಲಾಯಿತು.
ಸೂಕ್ತ ಭದ್ರತೆಗೆ ಕೋರಿದ್ದ ಟಿವಿಕೆ ಪಕ್ಷ
ಈ ಹಿಂದೆ ಕರೂರು ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿ ಸುಮಾರು 40 ಮಂದಿ ಮೃತಪಟ್ಟಿದ್ದರು. ಅಂತಹ ಮತ್ತೊಂದು ಘಟನೆ ಆಗದಂತೆ ಎಚ್ಚರ ವಹಿಸಿದ್ದ ಟಿವಿಕೆ ಪಕ್ಷವು ಇತ್ತೀಚೆಗಷ್ಟೆ ಚುನಾವಣೆ ಆಯೋಗದ ಮುಖ್ಯ ಆಯುಕ್ತರಾದ ಅರ್ಚನಾ ಪಾಟ್ನಾಯಕ್ ಅವರನ್ನು ಭೇಟಿ ಮಾಡಿ, ಚುನಾವಣಾ ಪ್ರಚಾರದಲ್ಲಿ ಅಗತ್ಯ ಭದ್ರತೆ ಒದಗಿಸುವಂತೆ ಕೋರಿತ್ತು. ಅದಾಗಿ ಒಂದೇ ದಿನದ ಅಂತರದಲ್ಲಿ ವಿಜಯ್ ಅವರ ಮೇಲೆ ದೂರು ದಾಖಲಾಗಿದೆ. ಇದರ ಹಿಂದೆ ರಾಜಕೀಯ ತಂತ್ರವು ಇದೆ ಎಂದು ಟಿವಿಕೆ ಪಕ್ಷದ ಸದಸ್ಯರು, ವಿಜಯ್ ಬೆಂಬಲಿಗರು ದೂರಿದ್ದಾರೆ.
ಡಿಎಂಕೆ ವಿರುದ್ಧ ಗುಡುಗಿದ ವಿಜಯ್
ಸೋಮವಾರ ನಾಮಪತ್ರ ಸಲ್ಲಿಕೆ ವೇಳೆ ಸಾಕಷ್ಟು ಜನರ ಸೇರಿದ್ದರು. ಈ ಬಾರಿ ತಮಿಳು ನಾಡು ಜನರ ಸೇವೆ ಮಾಡಲು ಟಿವಿಕೆ ಪಕ್ಷಕ್ಕೆ ಆಶೀರ್ವದಿಸುವಂತೆ ಕೋರಿದ್ದರು. ಜೊತೆಗೆ ಹಾಲಿ ಆಡಳಿತ ಪಕ್ಷ ಡಿಎಂಕೆ ಅಭಿವೃದ್ಧಿ ಮಾಡಿಲ್ಲ, ಭ್ರಷ್ಟಾಚಾರದಲ್ಲಿ ತೊಡಗಿದೆ. ಟಿವಿಕೆ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಯಾವುದೇ ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ ಎಂದು ಅವರು ಜನರಿಗೆ ಭರವಸೆ ನೀಡಿದ್ದಾರೆ. ನಾಮಪತ್ರದಲ್ಲಿ ತಾವು 645 ಕೋಟಿ ರೂಪಾಯಿ ಆಸ್ತಿ ಒಡೆಯನೆಂದು ಅವರು ಘೋಷಿಸಿದ್ದಾರೆ. ಇದು ರಾಜ್ಯದಲ್ಲಿ ಭಾರೀ ಚರ್ಚೆ ಆಗುತ್ತಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/actor-vijay-booked-complaint-tvk-founder-faces-case-for-election-code-violation-in-chennai-448945.html. xn--babytilbehr-pgb.com does not claim ownership of this content. All rights remain with the original publisher.
