Viral Video: ‘ಓಂಕಾರ’ ಚಿತ್ರದ ಬೀಡಿ ಜಲೈಲೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಬ್ರೆಜಿಲ್ ಬೆಡಗಿಯರು | Viral Video: Brazilian Bridesmaids Dance to Bollywood Song Beedi at Alibaug Cross Cultural Wedding

Entertainment

oi-Pragathi S

ಭಾರತೀಯ ಸಂಸ್ಕೃತಿ, ಬಾಲಿವುಡ್ ಹಾಡುಗಳು ಮತ್ತು ಇಲ್ಲಿನ ವಿಶಿಷ್ಟ ಕಲೆಗಳು ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ ಎನ್ನುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಗುತ್ತಿರುವ ವಿಡಿಯೋವೊಂದು ಅತ್ಯುತ್ತಮ ಮತ್ತು ತಾಜಾ ಉದಾಹರಣೆಯಾಗಿದೆ. ಬ್ರೆಜಿಲ್ ಮೂಲದ ಯುವತಿಯೊಬ್ಬಳು ತನ್ನ ಭಾರತೀಯ ಗೆಳೆಯನನ್ನು ಮಹಾರಾಷ್ಟ್ರದ ಪ್ರಸಿದ್ಧ ಕರಾವಳಿ ತಾಣವಾದ ಅಲಿಬಾಗ್‌ನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾಳೆ.

ಈ ಅದ್ಧೂರಿ ಮದುವೆ ಸಮಾರಂಭದಲ್ಲಿ ವಧುವಿನ ಸ್ನೇಹಿತೆಯರು, ಅಂದರೆ ಬ್ರೆಜಿಲ್‌ನಿಂದ ಆಗಮಿಸಿದ್ದ ಆರು ಮಂದಿ ಯುವತಿಯರು (ಬ್ರೈಡ್ಸ್‌ಮೇಡ್ಸ್) ಬಾಲಿವುಡ್‌ನ ಸೂಪರ್ ಹಿಟ್ ‘ಬೀಡಿ ಜಲೈಲೆ…’ ಹಾಡಿಗೆ ಭರ್ಜರಿ ಹೆಜ್ಜೆ ಹಾಕುವ ಮೂಲಕ ಇಡೀ ಮದುವೆಗೆ ಅಪ್ಪಟ ದೇಸಿ ಸ್ಪರ್ಶ ನೀಡಿದ್ದಾರೆ. ವರ್ಣರಂಜಿತವಾದ ಸಾಂಪ್ರದಾಯಿಕ ಲೆಹೆಂಗಾ ತೊಟ್ಟು, 2006 ರಲ್ಲಿ ತೆರೆಕಂಡಿದ್ದ ‘ಓಂಕಾರ’ ಚಿತ್ರದ ಈ ಜನಪ್ರಿಯ ಹಾಡಿಗೆ ಅವರು ಮಾಡಿದ ಡ್ಯಾನ್ಸ್ ಈಗ ಇಂಟರ್‌ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ.

Viral Video

ವಿಶೇಷವೆಂದರೆ, ಈ ಹಾಡಿನಲ್ಲಿ ಮೂಲತಃ ಬಾಲಿವುಡ್ ನಟಿ ಬಿಪಾಶಾ ಬಸು ಮಾಡಿದ್ದ ಸಿಗ್ನೇಚರ್ ಸ್ಟೆಪ್ಸ್‌ (ಹುಕ್ ಸ್ಟೆಪ್) ಅನ್ನು ಬ್ರೆಜಿಲ್‌ನ ಈ ಯುವತಿಯರು ಯಥಾವತ್ತಾಗಿ, ಯಾವುದೇ ಮುಜುಗರವಿಲ್ಲದೆ ಮತ್ತು ಅಷ್ಟೇ ಎನರ್ಜಿಯಿಂದ ಮಾಡಿದ್ದಾರೆ. ವಿಕ್ ಕ್ಯಾಪೆಲರಿ (Vick Capelari) ಎಂಬುವವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಮದುವೆಯ ಡಾನ್ಸ್‌ ವಿಡಿಯೋವನ್ನು ಹಂಚಿಕೊಂಡಿದ್ದು, “ಪ್ರತಿಯೊಬ್ಬ ಬ್ರೆಜಿಲಿಯನ್ನರಿಗೂ ಗೊತ್ತಿರುವ ಏಕೈಕ ಭಾರತೀಯ ಹಾಡು ಇದಾಗಿದೆ” ಎಂದು ಆಕರ್ಷಕವಾದ ಶೀರ್ಷಿಕೆ ನೀಡಿದ್ದಾರೆ. ಜೊತೆಗೆ, “ನಮ್ಮ ಸ್ನೇಹಿತರ ಮದುವೆಗಾಗಿ ನಾವು ಕ್ಯಾಮಿನ್ಹೋ ದಾಸ್ ಇಂಡಿಯಾಸ್ ಹಾಡಿಗೆ ಕುಣಿದಿದ್ದೇವೆ” ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ತಕ್ಷಣವೇ ಭಾರತೀಯರಿಗೆ, ಅಪ್ಪಟ ಗ್ರಾಮೀಣ ಸೊಗಡಿನ ಈ ಬಾಲಿವುಡ್ ಐಟಂ ಸಾಂಗ್ ಬ್ರೆಜಿಲ್ ಜನರಿಗೆ ಇಷ್ಟೊಂದು ಚಿರಪರಿಚಿತವಾಗಿದ್ದು ಹೇಗೆ ಎಂಬ ದೊಡ್ಡ ಕುತೂಹಲ ಮೂಡಿತ್ತು.

ಬ್ರೆಜಿಲ್‌ನಲ್ಲಿ ‘ಬೀಡಿ’ ಹಾಡು ಇಷ್ಟೊಂದು ಫೇಮಸ್ ಆಗಲು ಕಾರಣವೇನು?

ಭಾರತೀಯರ ಈ ಪ್ರಶ್ನೆಗೆ ಕಾಮೆಂಟ್‌ ವಿಭಾಗದಲ್ಲಿಯೇ ಅನೇಕ ಬ್ರೆಜಿಲ್ ಪ್ರಜೆಗಳು ಉತ್ತರ ನೀಡಿದ್ದಾರೆ. ಇದರ ಹಿಂದಿನ ಅಸಲಿ ಕಾರಣ 2009ರಲ್ಲಿ ಬ್ರೆಜಿಲ್‌ನಲ್ಲಿಯೇ ನಿರ್ಮಾಣವಾಗಿ ಪ್ರಸಾರವಾಗುತ್ತಿದ್ದ ‘ಕ್ಯಾಮಿನ್ಹೋ ದಾಸ್ ಇಂಡಿಯಾಸ್’ ಎಂಬ ಜನಪ್ರಿಯ ಟೆಲಿವಿಷನ್ ಧಾರಾವಾಹಿ. ಪೋರ್ಚುಗೀಸ್ ಭಾಷೆಯಲ್ಲಿರುವ ಇದರ ಅರ್ಥ ‘ಇಂಡಿಯಾ – ಎ ಲವ್ ಸ್ಟೋರಿ’ ಎಂಬುದಾಗಿದೆ. ಈ ಧಾರಾವಾಹಿಯು ಪ್ರಮುಖವಾಗಿ ಭಾರತೀಯ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗಳ ನಡುವಿನ ವ್ಯತ್ಯಾಸ, ಜಾತಿ ಪದ್ಧತಿ ಹಾಗೂ ಭಿನ್ನ ಸಂಸ್ಕೃತಿಗಳ ಪ್ರೇಮಕಥೆಯನ್ನು ಆಧರಿಸಿತ್ತು. ಇದು ಬ್ರೆಜಿಲ್‌ನಲ್ಲಿ ಎಷ್ಟು ಜನಪ್ರಿಯವಾಗಿತ್ತೆಂದರೆ, ಪ್ರತಿಷ್ಠಿತ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿಯನ್ನೂ (International Emmy Award) ತನ್ನ ಮುಡಿಗೇರಿಸಿಕೊಂಡಿತ್ತು.

ಖ್ಯಾತ ಸಂಗೀತ ನಿರ್ದೇಶಕ ವಿಶಾಲ ಭಾರದ್ವಾಜ್ ಅವರ ನಿರ್ದೇಶನದ, ಸುನಿಧಿ ಚೌಹಾಣ್ ಮತ್ತು ಸುಖ್ವಿಂದರ್ ಸಿಂಗ್ ಹಾಡಿರುವ ಈ ‘ಬೀಡಿ ಜಲೈಲೆ…’ ಹಾಡನ್ನು ಆ ಧಾರಾವಾಹಿಯ ಶೀರ್ಷಿಕೆ ಗೀತೆಯಾಗಿ ಬಳಸಿಕೊಳ್ಳಲಾಗಿತ್ತು. ಪ್ರತಿದಿನ ಆ ಧಾರಾವಾಹಿ ಶುರುವಾಗುವಾಗ ಈ ಹಾಡು ಪ್ರಸಾರವಾಗುತ್ತಿದ್ದ ಕಾರಣ, ಬ್ರೆಜಿಲ್‌ನ ಇಡೀ ಒಂದು ತಲೆಮಾರು ಈ ಹಾಡನ್ನು ಕೇಳುತ್ತಲೇ, ಗುನುಗುತ್ತಲೇ ಬೆಳೆದಿದೆ. ಇದೇ ಕಾರಣಕ್ಕೆ ಬ್ರೆಜಿಲ್‌ನ ಪ್ರತಿಯೊಬ್ಬರಿಗೂ ಈ ಹಾಡಿನ ಟ್ಯೂನ್ ಮತ್ತು ರಿದಮ್ ಕಂಠಪಾಠವಾಗಿದೆ.

ಕಾಮೆಂಟ್ ವಿಭಾಗದಲ್ಲಿ ಅನೇಕ ಬ್ರೆಜಿಲಿಯನ್ನರು ಈ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ. “ನಮ್ಮೆಲ್ಲರಿಗೂ ‘ಕ್ಯಾಮಿನ್ಹೋ ದಾಸ್ ಇಂಡಿಯಾಸ್’ ಧಾರಾವಾಹಿ ಎಂದರೆ ತುಂಬಾ ಇಷ್ಟ, ಆ ದಿನಗಳು ಅದ್ಭುತವಾಗಿದ್ದವು” ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು, “ಭಾರತ ಒಂದು ಸುಂದರವಾದ ದೇಶ, ಅಲ್ಲಿನ ಹಾಡುಗಳಿಗೆ ಡ್ಯಾನ್ಸ್ ಮಾಡುವುದು ನಮಗೆ ಖುಷಿ ಕೊಡುತ್ತದೆ” ಎಂದಿದ್ದಾರೆ.

ಒಟ್ಟಿನಲ್ಲಿ, ಎರಡು ಭಿನ್ನ ದೇಶಗಳ ಸಂಸ್ಕೃತಿಗಳು ಮದುವೆಯೆಂಬ ವೇದಿಕೆಯಲ್ಲಿ ಒಂದೆಡೆ ಸೇರಿವೆ. ಬ್ರೆಜಿಲ್ ಯುವತಿಯರು ಭಾರತೀಯ ಸಂಪ್ರದಾಯವನ್ನು ಅಪ್ಪಿಕೊಂಡು ಲೆಹೆಂಗಾದಲ್ಲಿ ಮಿಂಚಿರುವ ಈ ವಿಡಿಯೋ ಈಗ ಜಾಗತಿಕ ಮಟ್ಟದಲ್ಲಿ ನೆಟ್ಟಿಗರ ಮನಗೆದ್ದಿದೆ. ಪರಕೀಯ ಸಂಸ್ಕೃತಿಯನ್ನು ಎಷ್ಟರ ಮಟ್ಟಿಗೆ ಪ್ರೀತಿಸಬಹುದು ಎನ್ನುವುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/viral-video-brazilian-bridesmaids-dance-to-bollywood-song-beedi-at-alibaug-cross-cultural-wedding-447343.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo