
International
oi-Pragathi S
ಮಕಾವು: ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಅಸಭ್ಯವಾಗಿ ವರ್ತಿಸಿದರೆ, ಅಥವಾ ಬೇರೆಯವರಿಗೆ ತೊಂದರೆ ನೀಡಿದರೆ ಪೊಲೀಸರು ಅವರನ್ನು ವಶಕ್ಕೆ ಪಡೆಯುವುದನ್ನು ನಾವು ನೋಡಿದ್ದೇವೆ. ಆದರೆ, ಚೀನಾದ ಮಕಾವು (Macau) ನಗರದಲ್ಲಿ ನಡೆದಿರುವ ಘಟನೆ ಮಾತ್ರ ಕೊಂಚ ವಿಭಿನ್ನವಾಗಿದೆ. ಇಲ್ಲಿ ಪೊಲೀಸರು ಯಾವುದೇ ಮನುಷ್ಯನನ್ನು ಬಂಧಿಸಿಲ್ಲ, ಬದಲಾಗಿ ವೃದ್ಧೆಯೊಬ್ಬರನ್ನು ಬೆಚ್ಚಿಬೀಳಿಸಿದ ಕಾರಣಕ್ಕಾಗಿ ‘ಹ್ಯೂಮನಾಯ್ಡ್ ರೋಬೋಟ್’ (Humanoid robot) ಒಂದನ್ನು ವಶಕ್ಕೆ ಪಡೆದು ಎಸ್ಕೇರ್ಟ್ ಮಾಡಿಕೊಂಡು ಹೋಗಿದ್ದಾರೆ. ಈ ವಿಚಿತ್ರ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತಂತ್ರಜ್ಞಾನದ ಬಳಕೆಯ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಘಟನೆಯ ಹಿನ್ನೆಲೆ ಏನು?
ವರದಿಗಳ ಪ್ರಕಾರ, ಮಕಾವು ನಗರದ ಜನನಿಬಿಡ ರಸ್ತೆಯಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಸುಮಾರು ನಾಲ್ಕು ಅಡಿ ಎತ್ತರದ ಈ ಹ್ಯೂಮನಾಯ್ಡ್ ರೋಬೋಟ್ ಅನ್ನು ಸ್ಥಳೀಯ ಶಿಕ್ಷಣ ಕೇಂದ್ರವೊಂದರ ಪ್ರಚಾರ ಕಾರ್ಯಗಳಿಗಾಗಿ ಬಳಸಲಾಗುತ್ತಿತ್ತು. ಶಿಕ್ಷಣ ಕೇಂದ್ರದಲ್ಲಿ ಕೆಲಸ ಮಾಡುವ 50 ವರ್ಷದ ವ್ಯಕ್ತಿಯೊಬ್ಬರು ಈ ರೋಬೋಟ್ ಅನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 70 ವರ್ಷದ ವೃದ್ಧೆಯೊಬ್ಬರು ತಮ್ಮ ಮೊಬೈಲ್ ಫೋನ್ ನೋಡುವಲ್ಲಿ ತಲ್ಲೀನರಾಗಿದ್ದರು. ಮೊಬೈಲ್ ನೋಡುತ್ತಾ ಸಾಗುತ್ತಿದ್ದ ಅವರಿಗೆ, ತಮ್ಮ ಹಿಂದೆಯೇ ನಿಶ್ಯಬ್ದವಾಗಿ ರೋಬೋಟ್ ಬರುತ್ತಿರುವುದು ಗಮನಕ್ಕೆ ಬಂದಿರಲಿಲ್ಲ.

ಅಚಾನಕ್ಕಾಗಿ ವೃದ್ಧೆ ಹಿಂದಿರುಗಿ ನೋಡಿದಾಗ, ಕೇವಲ ಕೆಲವೇ ಹೆಜ್ಜೆಗಳ ಅಂತರದಲ್ಲಿ ಈ ನಾಲ್ಕು ಅಡಿ ಎತ್ತರದ ಯಂತ್ರ ನಿಂತಿತ್ತು. ಇದನ್ನು ಸ್ವಲ್ಪವೂ ನಿರೀಕ್ಷಿಸದ ಆ ವೃದ್ಧೆ, ರೋಬೋಟ್ ಅನ್ನು ಏಕಾಏಕಿ ನೋಡಿ ಬೆಚ್ಚಿಬಿದ್ದಿದ್ದಾರೆ. ಗಾಬರಿ ಮತ್ತು ಕೋಪಗೊಂಡ ಅವರು, ಆ ಯಂತ್ರವನ್ನು ತರಾಟೆಗೆ ತೆಗೆದುಕೊಂಡರು. ರಸ್ತೆಯ ಮಧ್ಯೆ ವೃದ್ಧೆ ಮತ್ತು ಯಂತ್ರದ ನಡುವಿನ ಈ ಹೈಡ್ರಾಮಾವನ್ನು ನೋಡಲು ಸ್ಥಳದಲ್ಲಿ ಭಾರೀ ಜನಸಾಗರವೇ ಸೇರಿತು.
ಪೊಲೀಸರ ಎಂಟ್ರಿ ಮತ್ತು ರೋಬೋಟ್ ‘ಬಂಧನ’
ಸಾರ್ವಜನಿಕ ಸ್ಥಳದಲ್ಲಿ ಗದ್ದಲ ಉಂಟಾಗಿದ್ದನ್ನು ಗಮನಿಸಿದ ಸ್ಥಳೀಯ ಪೊಲೀಸರು ತಕ್ಷಣವೇ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ಅಧಿಕಾರಿಗಳು, ಆ ಹ್ಯೂಮನಾಯ್ಡ್ ರೋಬೋಟ್ ಅನ್ನು ವಶಕ್ಕೆ ಪಡೆದರು. ವೈರಲ್ ಆಗಿರುವ ವಿಡಿಯೋದಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ರೋಬೋಟ್‌ನ ಭುಜದ ಮೇಲೆ ಕೈಯಿಟ್ಟು, ಓರ್ವ ವ್ಯಕ್ತಿಯನ್ನು ಕರೆದೊಯ್ಯುವಂತೆ ಘಟನಾ ಸ್ಥಳದಿಂದ ಅದನ್ನು ಠಾಣೆಯತ್ತ ಕರೆದೊಯ್ಯದಿದ್ದು ನೆಟ್ಟಿಗರ ಗಮನ ಸೆಳೆದಿದೆ.
ಬೆಚ್ಚಿಬಿದ್ದಿದ್ದ ವೃದ್ಧೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಅದೃಷ್ಟವಶಾತ್, ಅವರಿಗೆ ಯಾವುದೇ ರೀತಿಯ ಗಾಯಗಳಾಗಿರಲಿಲ್ಲ. ತಪಾಸಣೆಯ ನಂತರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
🚨🇲🇴🇨🇳 BREAKING — Macau:
Police Arrested a Robot in China.
It Had Harassed an Elderly Woman. pic.twitter.com/V4adTHP02M
— ✦✦✦ 𝙿𝚊𝚖𝚙𝚑𝚕𝚎𝚝𝚜 ✦✦✦ (@PamphletsY) March 16, 2026
ನಂತರ ನಡೆದ ವಿಚಾರಣೆಯಲ್ಲಿ, ಈ ರೋಬೋಟ್ ಸ್ಥಳೀಯ ಶಿಕ್ಷಣ ಕೇಂದ್ರವೊಂದಕ್ಕೆ ಸೇರಿದ್ದು ಎಂಬುದು ಖಚಿತವಾಗಿದೆ. ಪೊಲೀಸರು ಆ ಯಂತ್ರವನ್ನು ಅದರ ಆಪರೇಟರ್‌ಗೆ (ಶಿಕ್ಷಣ ಕೇಂದ್ರದ ಸಿಬ್ಬಂದಿಗೆ) ಹಿಂತಿರುಗಿಸಿದ್ದಾರೆ. ಆದರೆ, ಜನನಿಬಿಡ ಸಾರ್ವಜನಿಕ ಪ್ರದೇಶಗಳಲ್ಲಿ ಇಂತಹ ತಂತ್ರಜ್ಞಾನಗಳನ್ನು ಪರೀಕ್ಷಿಸುವಾಗ ಅಥವಾ ಪ್ರದರ್ಶಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರಿಗೆ, ವಿಶೇಷವಾಗಿ ವೃದ್ಧರು ಮತ್ತು ಮಕ್ಕಳಿಗೆ ಇದರಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಆಯೋಜಕರ ಜವಾಬ್ದಾರಿ ಎಂದು ಪೊಲೀಸರು ತಾಕೀತು ಮಾಡಿದ್ದಾರೆ.
ಆನ್‌ಲೈನ್‌ನಲ್ಲಿ ಶುರುವಾದ ಚರ್ಚೆ
ಈ ಘಟನೆಯು ಕೇವಲ ತಮಾಷೆಯ ಸುದ್ದಿಯಾಗಿ ಉಳಿದಿಲ್ಲ; ಬದಲಾಗಿ ದೈನಂದಿನ ಜೀವನದಲ್ಲಿ ಯಂತ್ರಗಳ ಹಸ್ತಕ್ಷೇಪದ ಬಗ್ಗೆ ಗಂಭೀರ ಚರ್ಚೆಗೆ ನಾಂದಿ ಹಾಡಿದೆ. ಭವಿಷ್ಯದಲ್ಲಿ ನಗರ ಪ್ರದೇಶಗಳಲ್ಲಿ ರೋಬೋಟ್‌ಗಳ ಬಳಕೆ ಇನ್ನಷ್ಟು ಹೆಚ್ಚಾಗಲಿದ್ದು, ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸ್ಪಷ್ಟವಾದ ಮಾರ್ಗಸೂಚಿಗಳು (Guidelines) ಮತ್ತು ನಿಯಮಾವಳಿಗಳ ಅಗತ್ಯವಿದೆ ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/humanoid-robot-escorted-by-police-in-macau-after-startling-elderly-woman-a-bizarre-tech-incident-447321.html. xn--babytilbehr-pgb.com does not claim ownership of this content. All rights remain with the original publisher.
