Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ | Viral Video: 11 Year Old Pilot Rishi Sharma Wows Internet With Smooth Touch, Go Landing in California

India

oi-Pragathi S

ಕ್ಯಾಲಿಫೋರ್ನಿಯಾ: ಕಾರು ಅಥವಾ ಬೈಕ್ ಓಡಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಎನ್ನುವ ಕಟ್ಟುನಿಟ್ಟಿನ ನಿಯಮವಿದೆ. ಆದರೆ ಕೇವಲ 11 ವರ್ಷದ ಬಾಲಕನೊಬ್ಬ ಇಲ್ಲಿ ಲೀಲಾಜಾಲವಾಗಿ ವಿಮಾನವನ್ನು ನಿಯಂತ್ರಿಸಿ, ಲ್ಯಾಂಡಿಂಗ್ ಮಾಡಿದರೆ ಹೇಗಿರುತ್ತದೆ ಊಹಿಸಿ? ಹೌದು, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 11 ವರ್ಷದ ಬಾಲಕನೊಬ್ಬ ‘ಪೈಲಟ್ ಇನ್ ಟ್ರೈನಿಂಗ್’ (Pilot-in-training) ಆಗಿ ವಿಮಾನವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಆತನ ತಾಳ್ಮೆ ಮತ್ತು ಕೌಶಲ್ಯ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಈ 11 ವರ್ಷದ ಪುಟ್ಟ ಪೈಲಟ್‌ನ ಹೆಸರು ರಿಷಿ ಶರ್ಮಾ. ಕ್ಯಾಲಿಫೋರ್ನಿಯಾದ ಆಕ್ಸ್‌ನಾರ್ಡ್ (Oxnard) ವಿಮಾನ ನಿಲ್ದಾಣದಲ್ಲಿ ತರಬೇತಿ ವಿಮಾನವನ್ನು ಅತ್ಯಂತ ಆತ್ಮವಿಶ್ವಾಸದಿಂದ ಮುನ್ನಡೆಸಿದ ರಿಷಿ, ಪೈಲಟ್ ತರಬೇತಿಯ ಅತ್ಯಂತ ಪ್ರಮುಖ ಹಂತವಾದ “ಟಚ್ ಅಂಡ್ ಗೋ” (Touch and go) ಲ್ಯಾಂಡಿಂಗ್ ಅನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾನೆ.

Viral Video

ವಿಮಾನವನ್ನು ರನ್‌ವೇ ಮೇಲೆ ಕೆಲವೇ ಕ್ಷಣಗಳ ಕಾಲ ಲ್ಯಾಂಡ್ ಮಾಡಿ, ವಿಮಾನವನ್ನು ಸಂಪೂರ್ಣವಾಗಿ ನಿಲ್ಲಿಸದೆ ತಕ್ಷಣವೇ ಮತ್ತೆ ಟೇಕ್-ಆಫ್ ಮಾಡುವ ಪ್ರಕ್ರಿಯೆಯನ್ನು “ಟಚ್ ಅಂಡ್ ಗೋ” ಎಂದು ಕರೆಯಲಾಗುತ್ತದೆ. ಇದಕ್ಕಾಗಿ ಅತ್ಯಂತ ಹೆಚ್ಚಿನ ಏಕಾಗ್ರತೆ ಹಾಗೂ ಚಾಣಾಕ್ಷತೆಯ ಅಗತ್ಯವಿರುತ್ತದೆ. ಆದರೆ ಪುಟ್ಟ ಬಾಲಕ ರಿಷಿ ಯಾವುದೇ ಆತಂಕವಿಲ್ಲದೆ ಇದನ್ನು ಮಾಡಿತೋರಿಸಿದ್ದಾನೆ.

ವೈರಲ್‌ ವಿಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ, ಬಾಲಕ ರಿಷಿ ರನ್‌ವೇ 25 ರಲ್ಲಿ ವಿಮಾನವನ್ನು ಅತ್ಯಂತ ಸಮತೋಲನದಿಂದ ಕೆಳಗೆ ಇಳಿಸುತ್ತಾನೆ. ಆಗ ಆತನ ಪಕ್ಕದಲ್ಲಿ ಕುಳಿತಿದ್ದ ತರಬೇತುದಾರ “ವೆರಿ ಗುಡ್ ಲ್ಯಾಂಡಿಂಗ್” ಎಂದು ಪ್ರಶಂಸಿಸುವುದನ್ನು ನಾವು ಕೇಳಬಹುದು. ಲ್ಯಾಂಡ್ ಆದ ಮರುಕ್ಷಣವೇ ಮತ್ತೆ ಎಂಜಿನ್ ಪವರ್ ಹೆಚ್ಚಿಸಿ, ಫ್ಲ್ಯಾಪ್‌ಗಳನ್ನು (flaps) ಸರಿಹೊಂದಿಸಿ ಮತ್ತೆ ವಿಮಾನವನ್ನು ಗಾಳಿಯಲ್ಲಿ ಸರಾಗವಾಗಿ ಹಾರಿಸುತ್ತಾನೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಆತನ ಮುಖದಲ್ಲಿನ ತಾಳ್ಮೆ, ಗಮನ ಮತ್ತು ವಿಮಾನದ ಮೇಲಿನ ನಿಯಂತ್ರಣ ನಿಜಕ್ಕೂ ವಿಸ್ಮಯಕಾರಿಯಾಗಿದೆ.

ಸಾಮಾನ್ಯವಾಗಿ ಮಕ್ಕಳು ಈ ವಯಸ್ಸಿನಲ್ಲಿ ಆಟಿಕೆ ವಿಮಾನಗಳೊಂದಿಗೆ ಆಡುತ್ತಾರೆ. ಆದರೆ ರಿಷಿ, ತನ್ನ 7ನೇ ವಯಸ್ಸಿನಿಂದಲೇ ವಿಮಾನ ಚಾಲನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ತರಬೇತಿ ಪಡೆಯಲು ಆರಂಭಿಸಿದ್ದನು. ತನ್ನ ಕನಸಿನ ಗುರಿಯಾದ ಪೈಲಟ್ ಆಗುವ ಹಾದಿಯಲ್ಲಿ ಆತ ದಿನೇ ದಿನೇ ಹೊಸ ಮೆಟ್ಟಿಲುಗಳನ್ನು ಏರುತ್ತಿದ್ದಾನೆ. ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಕ್ಯಾಪ್ಶನ್‌ನಲ್ಲಿ “ಇದು ಕೇವಲ ಉತ್ತಮ ಲ್ಯಾಂಡಿಂಗ್ ಅಥವಾ ಅದೃಷ್ಟವೇ? ಸಣ್ಣ ಪೈಲಟ್, ಸ್ಮೂತ್ ಲ್ಯಾಂಡಿಂಗ್. ಗುರಿಯೆಡೆಗಿನ ಪಯಣದಲ್ಲಿ ಇದೊಂದು ಹೊಸ ಹೆಜ್ಜೆ” ಎಂದು ಬರೆಯಲಾಗಿದೆ.

ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ವಾಣಿಜ್ಯ ಪೈಲಟ್ ಲೈಸೆನ್ಸ್ ಪಡೆಯಲು ನಿರ್ದಿಷ್ಟ ವಯೋಮಿತಿ ಇದೆ. ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ನಿಯಮಗಳ ಪ್ರಕಾರವೂ ಈ ಸಣ್ಣ ವಯಸ್ಸಿನಲ್ಲಿ ಏಕಾಂಗಿಯಾಗಿ ವಿಮಾನ ಹಾರಿಸಲು (Solo flight) ಅನುಮತಿಯಿಲ್ಲ. ಹೀಗಾಗಿ ರಿಷಿ ಪ್ರಮಾಣೀಕೃತ ಫ್ಲೈಟ್ ಇನ್‌ಸ್ಟ್ರಕ್ಟರ್‌ಗಳ ಕಟ್ಟುನಿಟ್ಟಿನ ಮಾರ್ಗದರ್ಶನದಲ್ಲಿ ಈ ಕಠಿಣ ತರಬೇತಿ ಪಡೆಯುತ್ತಿದ್ದಾನೆ.

ನೆಟ್ಟಿಗರ ಮೆಚ್ಚುಗೆಯ ಮಹಾಪೂರ

ಈ ವಿಡಿಯೋ ನೋಡಿದ ವೀಕ್ಷಕರು ಆಶ್ಚರ್ಯಚಕಿತರಾಗಿದ್ದಾರೆ. ಅನೇಕರು ಕಮೆಂಟ್ ವಿಭಾಗದಲ್ಲಿ “ಈ ಬಾಲಕನ ವಿಮಾನ ಚಾಲನಾ ಕೌಶಲ್ಯವು, ಅನೇಕ ವಯಸ್ಕರ ಕಾರು ಚಾಲನಾ ಕೌಶಲ್ಯಕ್ಕಿಂತ ಎಷ್ಟೋ ಪಾಲು ಉತ್ತಮವಾಗಿದೆ” ಎಂದು ತಮಾಷೆ ಮಾಡಿದ್ದಾರೆ. “ಇಷ್ಟು ಸಣ್ಣ ವಯಸ್ಸಿನಲ್ಲೇ ಇಂತಹ ಶಿಸ್ತು ಮತ್ತು ಏಕಾಗ್ರತೆ ಹೊಂದಿರುವುದು ಮುಂದಿನ ಉಜ್ವಲ ಭವಿಷ್ಯದ ಸಂಕೇತ” ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ. ಒಟ್ಟಿನಲ್ಲಿ, ಸಣ್ಣ ವಯಸ್ಸಿನಲ್ಲೇ ಸರಿಯಾದ ಮಾರ್ಗದರ್ಶನ ಹಾಗೂ ಆಸಕ್ತಿ ಇದ್ದರೆ, ಮಕ್ಕಳು ಎಂತಹ ಕಠಿಣ ಸಾಧನೆಯನ್ನಾದರೂ ಮಾಡಬಲ್ಲರು ಎಂಬುದಕ್ಕೆ ರಿಷಿ ಶರ್ಮಾ ಅವರ ಈ ಸಾಹಸವೇ ಸಾಕ್ಷಿಯಾಗಿದೆ. ಭವಿಷ್ಯದಲ್ಲಿ ಈ ಯುವ ಪೈಲಟ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ಎಲ್ಲರ ಆಶಯವಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/viral-video-11-year-old-pilot-rishi-sharma-wows-internet-with-smooth-touch-go-landing-in-californi-448393.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo