
Sports
oi-Madhusudhan KR
Virat Kohli: ಭಾರತೀಯ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರು ರಿಂಕು ಸಿಂಗ್ ಅವರ ತಂದೆ ಖಾಂಚಂದ್ ಸಿಂಗ್ ಅವರ ನಿಧನಕ್ಕೆ ಸಾಮಾಜಿಕ ಜಾಲತಾಣ ತಮ್ಮ ಟ್ವಿಟರ್ ಖಾತೆ ಮೂಲಕ ಸಂತಾಪ ಸೂಚಿಸಿದ್ದಾರೆ. ಲಿವರ್ ಕ್ಯಾನ್ಸರ್ನಿಂದ ಕಳೆದ ಕೆಲವು ದಿನಗಳಿಂದ ಬಳಲುತ್ತಿದ್ದ ಖಾಂಚಂದ್ ಅವರು ಶುಕ್ರವಾರ (ಫೆಬ್ರವರಿ 27) ಬೆಳಗಿನ ಜಾವ ನಿಧನರಾದರು.
ಖಾಂಚಂದ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಫೆಬ್ರವರಿ 21ರಂದು ಗ್ರೇಟರ್ ನೋಯ್ಡಾದ ಯಥಾರ್ಥ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರಿಗೆ ವೆಂಟಿಲೇಟರ್ ಹಾಕಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು ಎನ್ನುವ ಮಾಹಿತಿ ತಿಳಿದುಬಂದಿತು.

ಸಂತಾಪ ಸೂಚಿಸಿದ ವಿರಾಟ್ ಕೊಹ್ಲಿ
ಇನ್ನೂ ಖಾಂಚಂದ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ವಿರಾಟ್ ಕೊಹ್ಲಿ, “ರಿಂಕು ಅವರ ತಂದೆಯ “ರಿಂಕು ಅವರ ತಂದೆಯ ನಿಧನದ ಸುದ್ದಿಯಿಂದ ನನಗೆ ತೀವ್ರ ದುಃಖವಾಗಿದೆ. ಈ ಅತ್ಯಂತ ಕಷ್ಟದ ಸಮಯದಲ್ಲಿ ನನ್ನ ಹೃತ್ಪೂರ್ವಕ ಪ್ರಾರ್ಥನೆಗಳು ಮತ್ತು ಆಲೋಚನೆಗಳು ನಿಮ್ಮ ಹಾಗೂ ನಿಮ್ಮ ಕುಟುಂಬದೊಂದಿಗೆ ಇವೆ. ಅವರ ಶಾಶ್ವತ ಆಶೀರ್ವಾದಗಳು ನಿಮಗೆ ಸದಾ ಶಕ್ತಿ ನೀಡಲಿ. ಓಂ ಶಾಂತಿ,” ಎಂದು ತಿಳಿಸಿದ್ದಾರೆ.
Deeply saddened by the news of Rinku’s father’s demise. My heartfelt prayers and thoughts are with you and your family during this difficult time. May you always find strength in his eternal blessings. Om Shanti. 🙏 @rinkusingh235
— Virat Kohli (@imVkohli) February 27, 2026
ಖಾಂಚಂದ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ ಗ್ರೇಟರ್ ನೋಯ್ಡಾದಿಂದ ಅಲಿಘಢ್ಗೆ ತರಲಾಯಿತು. ಅಲ್ಲಿ ನಡೆದ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ, ಪುತ್ರ ರಿಂಕು ಸಿಂಗ್ ತಮ್ಮ ತಂದೆಯ ಪಾರ್ಥಿವ ಶರೀರಕ್ಕೆ ಭುಜಕೊಟ್ಟು ಅಂತಿಮ ನಮನ ಸಲ್ಲಿಸಿದರು. ಚೆನ್ನೈಯಿಂದ ಬೆಳಗ್ಗೆ 5:00 ಗಂಟೆಗೆ ನವದೆಹಲಿ ಕಡೆಗೆ ಪ್ರಯಾಣಿಸಿದ ರಿಂಕು, ತಂದೆಯ ಆರೋಗ್ಯ ಸ್ಥಿತಿ ಹದಗೆಟ್ಟಾಗ ಅವರ ಬಳಿಯೇ ಇದ್ದರು. ನಂತರ ಭಾರತದ ಜಿಂಬಾಬ್ವೆ ವಿರುದ್ಧದ ಟಿ20 ವಿಶ್ವಕಪ್ ಪಂದ್ಯಕ್ಕೂ ಮುನ್ನ ಮತ್ತೆ ತಂಡವನ್ನು ಸೇರಿಕೊಂಡರು.
ಆ ಪಂದ್ಯವು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ನಡೆಯಿತು. ಆದರೆ, ಆ ಪಂದ್ಯದಲ್ಲಿ ರಿಂಕು ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯಲಿಲ್ಲ. ಬದಲಿಗೆ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲಾಗಿದ್ದು, ಅವರು ಅಭಿಷೇಕ್ ಶರ್ಮಾ ಅವರ ಜೊತೆಗೆ ಇನ್ನಿಂಗ್ಸ್ ಆರಂಭಿಸಿದರು. ಈ ಮೊದಲು, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು, ರಿಂಕು ಸಿಂಗ್ ಅವರು ಭಾನುವಾರ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸೂಪರ್ 8 ಪಂದ್ಯಕ್ಕೆ ತಂಡದೊಂದಿಗೆ ಕೋಲ್ಕತ್ತಾಗೆ ಪ್ರಯಾಣಿಸುವುದಿಲ್ಲ ಎಂದು ಹೇಳಿದ್ದಾರೆ.
ಸಂತಾಪ ಸೂಚಿಸಿದ ಪ್ರೇಮ್ ಮನೋಹರ್ ಗುಪ್ತಾ
ಯುಪಿಸಿಎ ಅಧ್ಯಕ್ಷ ಪ್ರೇಮ್ ಮನೋಹರ್ ಗುಪ್ತಾ ಕೂಡ ಕ್ರಿಕೆಟಿಗ ರಿಂಕು ಸಿಂಗ್ ಅವರ ತಂದೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಐಎಎನ್ಎಸ್ಗೆ ಪ್ರತಿಕ್ರಿಯಿಸಿದ ಅವರು, “ರಿಂಕು ಸಿಂಗ್ ಅವರ ತಂದೆಯ ನಿಧನ ಸುದ್ದಿ ಕೇಳಿ ತುಂಬಾ ಬೇಸರವಾಯಿತು. ಕುಟುಂಬದಲ್ಲಿ ಸಂತೋಷದ ಕ್ಷಣಗಳು ಈಗಷ್ಟೇ ಆರಂಭವಾಗಿದ್ದವು. ಇತ್ತೀಚೆಗಷ್ಟೇ ರಿಂಕು ಅವರ ಮದುವೆ ನಿಶ್ಚಿಯಗೊಂಡಿತ್ತು. ಇಂತಹ ಸಂದರ್ಭದಲ್ಲೇ ಅವರು ತಂದೆಯನ್ನೂ ಕಳೆದುಕೊಂಡ ನೋವಿನಲ್ಲಿದ್ದಾರೆ. ಆದರೆ, ಸಂಪೂರ್ಣ ಯುಪಿಸಿಎ ರಿಂಕು ಸಿಂಗ್ ಮತ್ತು ಅವರ ಕುಟುಂಬದೊಂದಿಗೆ ದೃಢವಾಗಿ ನಿಂತಿದೆ,” ಎಂದು ತಿಳಿಸಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸಂತಾಪ
ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಅವರು ತಮ್ಮ ಎಕ್ಸ್ನಲ್ಲಿ ರಿಂಕು ಸಿಂಗ್ ತಂದೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಟ್ವಿಟರ್ ಪೋಸ್ಟ್ನಲ್ಲಿ “ರಿಂಕು ಸಿಂಗ್ ಅವರ ತಂದೆಯ ನಿಧನ ಸುದ್ದಿ ಕೇಳಿ ತುಂಬಾ ದುಃಖವಾಗಿದೆ. ದೇವರು ಅವರು ಹಾಗೂ ಅವರ ಕುಟುಂನಕ್ಕೆ ಧೈರ್ಯ ಮತ್ತು ಶಕ್ತಿ ನೀಡಲಿ,” ಎಂದು ಅವರು ತಿಳಿಸಿದ್ದಾರೆ
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/virat-kohli-expresses-condolences-on-rinku-singh-s-father-khanchand-singhs-passing-in-twitter-445359.html. xn--babytilbehr-pgb.com does not claim ownership of this content. All rights remain with the original publisher.
