
India
oi-Hitesh Y
US-Israel-Iran War: ಮಧ್ಯಪ್ರಾಚ್ಯದಲ್ಲಿ ಯುದ್ಧದ ತೀವ್ರತೆಯು ಭೀಕರ ಸ್ವರೂಪವನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಈ ಯುದ್ಧದ ಪರಿಣಾಮಗಳು ಭಾರತದ ಮೇಲೂ ಬೀಳುವುದಕ್ಕೆ ಪ್ರಾರಂಭವಾಗಿದೆ. ಮಧ್ಯಪ್ರಾಚ್ಯ ಯುದ್ಧ: ಭಾರತಕ್ಕೀಗ ದೇವರೇ ಗತಿ: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
ನಮ್ಮದೀಗ Force Majeure (ದೇವರೇ ಗತಿ) ಭಾರತ. ವ್ಯಾಪಾರಿಗಳ ಕೈಗೆ ದೇಶವನ್ನು ಕೊಟ್ಟರೆ ಏನಾಗಬಹುದು ಎಂಬುದಕ್ಕೆ ಉದಾಹರಣೆಗಳು ಮತ್ತೆ ಮತ್ತೆ ಕಾಣಸಿಗತೊಡಗಿವೆ. ಅಮೆರಿಕವು ಕಚ್ಚಾ ಪೆಟ್ರೋಲಿಯಂ, ಇಂಧನ ರಷ್ಯಾದಿಂದ ಆಮದು ಮಾಡಿಕೊಳ್ಳಲು ಸಾರ್ವಭೌಮ ರಾಷ್ಟ್ರವಾದ ಭಾರತಕ್ಕೆ 30 ದಿನಗಳ ಮಟ್ಟಿಗೆ ಅನುಮತಿ ನೀಡಿದೆ ಎಂಬ ಸುದ್ದಿಯ ಬೆನ್ನಲ್ಲೇ, ನಿನ್ನೆ ವಾಣಿಜ್ಯ ಬಳಕೆಯ LPG ಸಿಲಿಂಡರುಗಳ ಕೊರತೆಯ ಹೆಸರಿನಲ್ಲಿ ಹೊಟೇಲು ಉದ್ಯಮ ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ಮುಚ್ಚಬಹುದು ಎಂಬ ವದಂತಿಗಳು ಹರಿದಾಡುತ್ತಿವೆ.

ಒಂದು ವೇಳೆ, ಹೊಟೇಲು ಮುಚ್ಚುವ ಯೋಚನೆ ಕಾರ್ಯರೂಪಕ್ಕೆ ಬರತೊಡಗಿದರೆ ಅದು ಚೈನ್ ರಿಯಾಕ್ಷನ್ಗಳಿಗೆ ಕಾರಣ ಆಗಬಹುದು. ಮೊದಲಿಗೆ ಹೊಟೇಲು ಕಾರ್ಮಿಕರು, ಆ ಬಳಿಕ ಗಿಗ್ ಕಾರ್ಮಿಕರು, ಬೆಂಗಳೂರಿನಂತಹಾ ಮಹಾನಗರಗಳಲ್ಲಿ ಹೊಟೇಲು ಆಹಾರವನ್ನು ಆಧರಿಸಿ ಬದುಕುವ ಅಸಂಖ್ಯ ವಲಸೆ ದುಡಿಮೆಗಾರರು. ಆ ಬಳಿಕ ಕಿರಾಣಿ, ತರಕಾರಿ ಸರಬರಾಜುದಾರರು, ರೈತರು… ಹೀಗೆ ಸಾಲುಸಾಲಾಗಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಬಹುದು. ಇನ್ನೊಂದೆಡೆ ಅಡುಗೆ ಅನಿಲಕ್ಕೆ, ಪೆಟ್ರೋಲು-ಡೀಸೆಲ್ಗೆ ಸರತಿ ಸಾಲು…ಅಗತ್ಯ ವಸ್ತುಗಳ ಬೆಲೆ ಹದತಪ್ಪಿ ಏರಿಕೆ… ಇತ್ಯಾದಿ. ಇಂತಹವುಗಳ ಪರಿಣಾಮಗಳನ್ನೆಲ್ಲ ಊಹಿಸುವುದೂ ಸಾಧ್ಯ ಇಲ್ಲ.
ನಮ್ಮ ಮಾಧ್ಯಮಗಳು ಈವತ್ತು ಎಷ್ಟು ಬುದ್ಧಿಹೀನ ಸ್ಥಿತಿಗೆ ತಲುಪಿವೆ ಎಂದರೆ, ರಷ್ಯಾದಿಂದ ಬರುವ ಕಚ್ಚಾತೈಲ ಏನಾಗಲಿದೆ, ಅದು ಈ ಆವಶ್ಯಕ ವಸ್ತುಗಳ ಉತ್ಪಾದನೆಗೆ ಬಳಕೆ ಆಗಬೇಕಲ್ಲ? ಹೀಗಿದ್ದೂ ಕೊರತೆಯ ಮಾತು ಏಕೆ ಏಳುತ್ತಿದೆ. ಎಂಬ ಪ್ರಶ್ನೆಗಳೆಲ್ಲ ಅವರಿಗೆ ಏಳುವುದೇ ಇಲ್ಲ. ಆನಿಗಳೇ ನಡೆಸುವ ಡಿಯರ್ ಮೀಡಿಯಾಗಳಿಗೆ, ಈ ಕಚ್ಚಾತೈಲ ಆಮದಾಗಿ ಬರುವುದು ಇದೇ ಆನಿಗಳ ರಿಫೈನರಿಗಳಿಗೆ ಮತ್ತು ಅಲ್ಲಿಂದ ಅದು ಪೆಟ್ರೋಲಿಯಂ ಉತ್ಪನ್ನಗಳಾಗಿ ರಫ್ತಾಗಿ ಕಾಸು ಬರುವುದು ಆನಿಗಳ ಕಿಸೆಗೆ ಎಂಬ ವಾಸ್ತವ ಗೊತ್ತಿಲ್ಲದ್ದೇನಲ್ಲ. ಮೊನ್ನೆ MRPL ತನ್ನ ಉತ್ಪಾದನೆಗಳಿಗೆ Force Majeure ಪ್ರಕಟಿಸಿದ್ದನ್ನು ಪತ್ರಿಕೆಗಳಲ್ಲಿ ಓದಿದೆ.
ಒಂದು ಸರ್ಕಾರ ತನ್ನ ಜನ ಪ್ಯಾನಿಕ್ ಏಳಬಾರದು ಎಂದಿದ್ದರೆ, ಈ ಎಲ್ಲ ವಿಚಾರಗಳಲ್ಲಿ ಮುಂಜಾಗ್ರತೆ ವಹಿಸಿ, ರಫ್ತು ತಾತ್ಕಾಲಿಕ ತಡೆ, ದೇಶದ ಹಿತಾಸಕ್ತಿಗಳ ರಕ್ಷಣೆ ಎಂದು ಹೊರಡಬೇಕಿತ್ತು. ಅದರ ಬದಲು ಸಣ್ಣಗೆ ಪ್ಯಾನಿಕ್ ಹರಡಬಲ್ಲ ಸುದ್ದಿಗಳೇ ಹೊರಬೀಳುತ್ತಿವೆ. ವಾಸ್ತವ ಅಂಕಿ – ಅಂಶಗಳನ್ನು ತೆಗೆದು ನೋಡಿದರೆ, ದೇಶ ಇನ್ನು 15-20 ದಿನಗಳಿಗೆ ಪ್ಯಾನಿಕ್ ಏಳಬೇಕಾದ ಅಗತ್ಯ ಇಲ್ಲ. ಸರ್ಕಾರಗಳು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಸಾಕಾಗುತ್ತದೆ. ಆದರೆ, ಅದರ ಬದಲು, ವ್ಯಾಪಾರಿಗಳು ಆಯಕಟ್ಟಿನ ಜಾಗಗಳಲ್ಲಿ ಲಾಭದ ವಾಸನೆ ಎಲ್ಲಿದೆ ಎಂದು ಹುಡುಕಹತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ. ಇಂತಹ ಬೆಳವಣಿಗೆಗಳನ್ನು ಕಟ್ಟುನಿಟ್ಟಾಗಿ ಹತ್ತಿಕ್ಕದಿದ್ದರೆ, ಅದು ಸರ್ಕಾರಗಳೂ ವ್ಯಾಪಾರಿಗಳೊಂದಿಗೆ ಶಾಮೀಲಾಗಿರುವುದರ ಸೂಚನೆ.
ಹೋಗಲಿ, ನಮ್ಮ ದೇಶದಲ್ಲಿ ಬೇಕಾಬಿಟ್ಟಿ ಡೇಟಾ ಸೆಂಟರ್ಗಳನ್ನು ತೆರೆಯುವಷ್ಟು ವಿದ್ಯುತ್ ಇರುವುದು ಹೌದಾದರೆ, ಮಹಾನಗರದ ಹೊಟೇಲುಗಳಿಗೆ (ಉದಾ: ಬೆಂಗಳೂರು) ತತ್ಕಾಲಕ್ಕೆ ವಿದ್ಯುತ್ ಸ್ವಲ್ಪ ಸಬ್ಸಿಡಿ ದರದಲ್ಲೇ ಒದಗಿಸುತ್ತೇವೆ, ಹೊಟೇಲು ಮುಚ್ಚುವ ಹಂತಕ್ಕೆ ಹೋಗಬೇಡಿ, ವಿದ್ಯುತ್ ಬಳಸಿ ಅಡುಗೆ ಮಾಡಿ ಅನ್ನಬಹುದಲ್ಲ. ಅಷ್ಟು ವಿದ್ಯುತ್ ಇಲ್ಲ ಎಂದಾದರೆ, ತಳಪಾಯವೇ ಇಲ್ಲದ ಡೇಟಾ ಸೆಂಟರ್ ಯಾಕೆ ಬೇಕು ನಮಗೆ – ಹೊಟ್ಟೆಗೆ ಹಿಟ್ಟಿಲ್ಲದಾಗ ಜುಟ್ಟಿಗೆ ಮಲ್ಲಿಗೆ.
ಒಟ್ಟಿನಲ್ಲಿ, ಕಳೆದ ಹದಿನೈದು ವರ್ಷಗಳಲ್ಲಿ ದೇಶವನ್ನು Force Majeure (ದೇವರೇ ಗತಿ) ಸ್ಥಿತಿಗೆ ಸನ್ನದ್ಧಗೊಳಿಸುವ ಕೆಲಸಗಳು ಸಾಲುಸಾಲಾಗಿ ನಡೆಯುತ್ತಲೇ ಇವೆ. ನೋಟು ರದ್ಧತಿ, ಕೋವಿಡ್ ಲಾಕ್ಡೌನ್ ಬಳಿಕ ಈಗ ಗಲ್ಫ್ ವಾರ್! ಗಮನವಿಟ್ಟು ನೋಡಿದರೆ, ಇದೆಲ್ಲದರ ಹಿಂದೆ ಕಾಣಿಸುವುದು ಏಕೈಕ ಕಾರಣ – ವ್ಯಾಪಾರಿ ಪ್ರಭುತ್ವ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/world-war-us-israel-iran-war-from-global-trade-powers-to-god-now-india-in-focus-rajaram-tallur-s-446595.html. xn--babytilbehr-pgb.com does not claim ownership of this content. All rights remain with the original publisher.
