Yami Gautam: ಕನ್ನಡದಲ್ಲೇ ಧುರಂಧರ್‌ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್‌ ಹೀರೋ ಜೊತೆ ಚೊಚ್ಚಲ ನಟನೆ | Yami Gautam Debuted from Kannada Film Ullasa Utsaha Before Bollywood Fame director Aditya Dhar Wife

Entertainment

oi-Manohara M

ಸದ್ಯ ಭಾರತೀಯ ಚಿತ್ರರಂಗದಲ್ಲಿ ‘ಧುರಂಧರ್‌’ ಹಾಗೂ ‘ಧುರಂಧರ್‌-2’ ಸಿನಿಮಾಗಳದ್ದೇ ಹವಾ. ಈ ಸಿನಿಮಾಗಳ ಹಿಂದೆ ಇರುವ ಶಕ್ತಿ ಖ್ಯಾತ ನಿರ್ದೇಶಕ ಆದಿತ್ಯ ಧರ್. ಇನ್ನು ಇವರ ಪತ್ನಿ, ಪ್ರತಿಭಾವಂತ ನಟಿ ಯಾಮಿ ಗೌತಮ್ ಅವರು ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಆದರೆ, ಈ ಬಾಲಿವುಡ್ ಸುಂದರಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟಿದ್ದೇ ನಮ್ಮ ಕನ್ನಡ ಚಿತ್ರರಂಗದಿಂದ ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ.

ಇಂದು ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ಯಾಮಿ ಗೌತಮ್ ಸಣ್ಣ ವಯಸ್ಸಿನಲ್ಲೇ ತಮ್ಮ ಸಿನಿ ಪಯಣ ಶುರುಮಾಡಿದರು. 2010ರಲ್ಲಿ ತೆರೆಕಂಡ ‘ಗೋಲ್ಡನ್ ಸ್ಟಾರ್’ ಗಣೇಶ್ ಅಭಿನಯದ ‘ಉಲ್ಲಾಸ-ಉತ್ಸಾಹ’ (Ullasa Utsaha) ಸಿನಿಮಾ ಯಾಮಿ ನಟಿಸಿದ ಚೊಚ್ಚಲ ಚಿತ್ರ. ಈ ಸಿನಿಮಾದಲ್ಲಿ ಅವರು ‘ಮಹಾಲಕ್ಷ್ಮಿ’ ಎಂಬ ಪಾತ್ರದ ಮೂಲಕ ಅಚ್ಚಕನ್ನಡದ ಹುಡುಗಿಯಾಗಿ ಕನ್ನಡಿಗರ ಮನೆಮನ ತಲುಪಿದ್ದರು. ಆ ಕಾಲದಲ್ಲೇ ಅವರ ನಟನೆ ಮತ್ತು ಸೌಂದರ್ಯಕ್ಕೆ ಗಾಂಧಿನಗರದ ಮಂದಿ ಫಿದಾ ಆಗಿದ್ದರು.

Yami Gautam

ಕನ್ನಡ ಟು ಬಾಲಿವುಡ್

ಕನ್ನಡದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಯಾಮಿ, ಆನಂತರ ‘ವಿಕಿ ಡೋನರ್’ ಮೂಲಕ ಬಾಲಿವುಡ್‌ಗೆ ಲಗ್ಗೆ ಇಟ್ಟರು. ಈಗ ತಮ್ಮ ಪತಿ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್‌’ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ, ಯಾಮಿ ಅವರ ಈ ಹಳೆಯ ಕನ್ನಡದ ನಂಟು ಮತ್ತೆ ಮುನ್ನೆಲೆಗೆ ಬಂದಿದೆ. ಕನ್ನಡ ಸಿನಿಮಾ ಬಿಡುಗಡೆಯಾದ ಎರಡು ವರ್ಷಗಳ ನಂತರವಷ್ಟೇ ಅವರು ಹಿಂದಿ ಚಿತ್ರರಂಗಕ್ಕೆ ಪ್ರವೇಶ ಮಾಡಿದರು.

ಯಾಮಿ ಬಾಲ್ಯ ಮತ್ತು ಕುಟುಂಬ

ಬಾಲಿವುಡ್‌ನ ಖ್ಯಾತ ನಟಿ ಯಾಮಿ ಗೌತಮ್ ಅವರ ಸಿನಿ ಪಯಣ ನಮಗೆಲ್ಲ ಗೊತ್ತು. ಆದರೆ ಅವರ ಬಾಲ್ಯ, ಶಿಕ್ಷಣ ಮತ್ತು ವೈಯಕ್ತಿಕ ಜೀವನದ ಕೆಲವು ಅಪರೂಪದ ವಿಷಯಗಳು ಕುತೂಹಲದಿಂದ ಕೂಡಿವೆ. ಯಾಮಿ ಗೌತಮ್ ಮೂಲತಃ ಹಿಮಾಚಲ ಪ್ರದೇಶದ ಬಿಲಾಸ್‌ಪುರದ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ಆದರೆ ಅವರು ಬೆಳೆದಿದ್ದೆಲ್ಲ ಚಂಡೀಗಢದಲ್ಲಿ. ಇವರ ತಂದೆ ಮುಖೇಶ್ ಗೌತಮ್ ಅವರು ಪಂಜಾಬಿ ಚಿತ್ರರಂಗದ ಹೆಸರಾಂತ ನಿರ್ದೇಶಕರು ಹಾಗೂ ‘ಪಿಟಿಸಿ’ (PTC) ನೆಟ್‌ವರ್ಕ್‌ನ ಮುಖ್ಯ ಸಲಹೆಗಾರರಾಗಿದ್ದಾರೆ. ಇವರ ತಾಯಿ ಅಂಜಲಿ ಗೌತಮ್. ಯಾಮಿಗೆ ಸುರಿಲಿ ಎಂಬ ತಂಗಿ ಮತ್ತು ಓಜಸ್ ಎಂಬ ತಮ್ಮನಿದ್ದಾನೆ.

ಐಎಎಸ್ ಅಧಿಕಾರಿಯಾಗುವ ಕನಸು

ಚಿಕ್ಕ ವಯಸ್ಸಿನಲ್ಲಿ ಯಾಮಿ ಅವರಿಗೆ ನಟಿಯಾಗುವ ಆಸೆ ಇರಲಿಲ್ಲವಂತೆ. ಅವರು ಒಬ್ಬ ಐಎಎಸ್ (IAS) ಅಧಿಕಾರಿ ಆಗಬೇಕೆಂದು ಕನಸು ಕಂಡಿದ್ದರು. ಇದಕ್ಕಾಗಿ ಅವರು ಕಾನೂನು ಪದವಿಯನ್ನು ಅಭ್ಯಾಸ ಮಾಡುತ್ತಿದ್ದರು. ಆದರೆ 20ನೇ ವಯಸ್ಸಿನಲ್ಲಿ ಅವರ ಮನಸ್ಸು ನಟನೆಯತ್ತ ವಾಲಿತು. ನಟನಾ ವೃತ್ತಿಗಾಗಿ ಅವರು ಪೂರ್ಣಾವಧಿ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟರೂ, ನಂತರ ಮುಂಬೈನಲ್ಲಿ ಪಾರ್ಟ್-ಟೈಮ್ ಮೂಲಕ ಪದವಿ ಮುಂದುವರಿಸಿದರು.

Yami Gautam

‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರದ ನಿರ್ದೇಶಕರಾದ ಆದಿತ್ಯ ಧರ್ ಅವರನ್ನು ಯಾಮಿ 2021ರಲ್ಲಿ ಮದುವೆಯಾದರು. ಮದುವೆಯ ನಂತರ ಅವರು ತಮ್ಮ ಹೆಸರನ್ನು ಯಾಮಿ ಗೌತಮ್ ಧರ್ ಎಂದು ಬದಲಾಯಿಸಿಕೊಂಡಿದ್ದಾರೆ. ಕಳೆದ ವರ್ಷ ಈ ದಂಪತಿಗೆ ‘ವೇದಾವಿದ್’ ಎಂಬ ಗಂಡು ಮಗು ಜನಿಸಿದ್ದು, ಸದ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ನಟನೆಯ ಹೊರತಾಗಿ ಯಾಮಿ ಅವರಿಗೆ ಪುಸ್ತಕ ಓದುವುದು, ಮನೆಯ ಒಳಾಂಗಣ ವಿನ್ಯಾಸ ಮಾಡುವುದು ಮತ್ತು ಸಂಗೀತ ಕೇಳುವುದು ಎಂದರೆ ತುಂಬಾ ಇಷ್ಟ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/yami-gautam-debuted-from-kannada-film-ullasa-utsaha-before-bollywood-fame-director-aditya-dhar-wife-448193.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo